ಬೆಳಗಾವಿ: ಪಕ್ಷಕ್ಕೆ ಬರುವ ಕಾಂಗ್ರೆಸ್- ಜೆಡಿಎಸ್ ಮುಖಂಡರ ಬಳಿ ಚರ್ಚಿಸಿ ಅವರನ್ನು ಪಕ್ಷಕ್ಕೆ ಕರೆತನ್ನಿ ಎಂಬ ಬಿಎಸ್‍ವೈ ಹೇಳಿಕೆ ಬೆನ್ನಲ್ಲೆ ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದರು.
Advertisement
Advertisement
ಡಿಕೆಶಿ ಗೆ ಟಾಂಗ್: ಇನ್ನು ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಆದ್ಯತೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ರಮೇಶ್ ಜಾರಕಿಹೊಳಿ, ಅದು ಸಚಿವ ಡಿಕೆ ಶಿವಕುಮಾರ್ ವೈಯಕ್ತಿಕ ಅಭಿಪ್ರಾಯ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಉಪಕಾರ ಮಾಡಿದ್ದಾರೆ ಎಂದರು.
Advertisement
ಇದೇ ವೇಳೆ ಸಿದ್ದರಾಮಯ್ಯ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಆರೋಪಕ್ಕೂ ತಿರುಗೇಟುಕೊಟ್ಟ ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಾಮಾಲೆ ಕಣ್ಣಿಗೆ ಕಾಣೋದು ಹಳದಿಯಂತೆ ಹಾಗೇ ನಾವೇನು ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಹೊಸ ಬಜೆಟ್ ಕುರಿತು ಹೊಸ ಸರ್ಕಾರಕ್ಕೆ ಕೇವಲ ಸಲಹೆ ಕೊಟ್ಟಿದ್ದಾರೆ. ಸಲಹೆ ಸ್ವೀಕರಿಸುವುದು ಬಿಡುವುದು ಸಿಎಂ ಅವರಿಗೆ ಬಿಟ್ಟಿದ್ದು. ಹಿಂದಿನ ಸರ್ಕಾರದ ಯೋಜನೆ ಮುಂದುವರೆಸುವುದು ನಮ್ಮ ಉದ್ದೇಶ ಎಂದು ಹೇಳಿದರು.
Advertisement
ಉತ್ತರಕರ್ನಾಟಕ ನಾಯಕರಿಗೆ ನೀಡಲಿ: ಇದೇ ವೇಳೆ ಡಿಸಿಎಂ ಪರಮೇಶ್ವರ್ ಅವರ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೆ ನೀಡಿದರೆ ಒಳ್ಳೆಯದು. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಎಚ್‍ಕೆ ಪಾಟೀಲ್ ಯಾರಿಗಾದರು ನೀಡಿದರೂ ಒಳ್ಳೆಯದು ಎಂದು ತಿಳಿಸಿದರು.