Connect with us

Bengaluru City

ಸ್ಪೀಕರ್ ಆಗಿ ಕಾಗೇರಿ ಅವಿರೋಧ ಆಯ್ಕೆ – ಆರ್‌ಎಸ್‌ಎಸ್ ನಂಟು ಬಿಚ್ಚಿಟ್ಟ ಈಶ್ವರಪ್ಪ

Published

on

– ಸ್ಪೀಕರ್ ಹುದ್ದೆಯಲ್ಲಿದ್ದಾಗ ನಮ್ಮಲ್ಲಿ ಇಲ್ಲದ ಗುಣಗಳನ್ನೂ ಸೇರಿಸಿ ಹೊಗಳ್ತಾರೆ
– ಕಾಗೇರಿ ಕಾಲೆಳೆದ ರಮೇಶ್ ಕುಮಾರ್

ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷರಾಗಿ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಲಾಪ ಆರಂಭವಾದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಚುನಾಯಿಸುವಂತೆ ಪ್ರಸ್ತಾವ ಮಂಡಿಸಿದರು. ಸಿಎಂ ಪ್ರಸ್ತಾವಕ್ಕೆ ಶಾಸಕ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದರು. ಈ ವೇಳೆ ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ಅವರು ಸಭಾಧ್ಯಕ್ಷರ ಆಯ್ಕೆ ಪ್ರಸ್ತಾವವನ್ನು ಮತಕ್ಕೆ ಹಾಕಿ, ಧ್ವನಿಮತದ ಮೂಲಕ ಒಪ್ಪಿಗೆ ಪಡೆದರು. ಈ ಮೂಲಕ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆಯಾದರು.

ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಇಡೀ ಸದನದ ಘನತೆ ಕಾಪಾಡುತ್ತೀರಿ ಎನ್ನುವ ಭರವಸೆ ನಮಗಿದೆ. ಪಕ್ಷಾತೀತವಾಗಿ ಕೆಲಸ ಮಾಡುತ್ತೀರಿ ಅಂತ ನಂಬಿದ್ದೇವೆ. ಸ್ಪೀಕರ್ ಪಕ್ಷಾತೀತವಾಗಿ ಆಯ್ಕೆ ಆಗಬೇಕು. ಹಾಗಾಗಿ ನಮ್ಮ ಪಕ್ಷದಿಂದ ನಾವು ಅಭ್ಯರ್ಥಿ ಹಾಕಲಿಲ್ಲ. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಬಿಟ್ಟು ಹೋಗಿರುವ ಮೌಲ್ಯಗಳನ್ನು ಎತ್ತಿ ಹಿಡೀತೀರಿ ಎಂಬ ಭರವಸೆ ಇದೆ ಎಂದು ತಿಳಿಸಿದರು.

ಕಾಗೇರಿ ಅವರಿಗೆ ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್ ಅಭಿನಂದನೆ ಸಲ್ಲಿಸಿ, ಸ್ಪೀಕರ್ ಹುದ್ದೆಗೆ ಬಂದು ಕೂತಾಗ ನಮ್ಮಲ್ಲಿ ಇಲ್ಲದ ಗುಣಗಳನ್ನೂ ಸೇರಿಸಿ ಹೊಗಳುತ್ತಾರೆ. ಪಕ್ಷದಲ್ಲಿ ಯಾರಿಗೆ ಸಚಿವ ಸ್ಥಾನ ಕೊಡಕ್ಕಾಗಲ್ವೋ, ಹಿರಿಯರಿದ್ದಾರೋ ಅವರಿಗೆ ಸ್ಪೀಕರ್ ಸ್ಥಾನ ಕೊಡುತ್ತಾರೆ ಎಂದು ತಮಾಷೆ ಮಾಡಿದರು. ಈ ವೇಳೆ ಸದನದ ಸದಸ್ಯರು ನಗೆ ಬೀರಿದರು.

ಸದನದಲ್ಲಿ ಬಿಜೆಪಿ 80, ಕಾಂಗ್ರೆಸ್ 32, ಜೆಡಿಎಸ್ 12 ಸದಸ್ಯರು ಭಾಗಿಯಾಗಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಲವು ಶಾಸಕರು ಸಿದ್ಧಾರ್ಥ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಚಿಕ್ಕಮಗಳೂರಿಗೆ ತೆರಳಿದ್ದಾರೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಹಲವರು ಇಂದಿನ ಸದನಕ್ಕೆ ಗೈರು ಆಗಿದ್ದರು.

ನೂತನ ಸ್ಪೀಕರ್ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು, ಹಿಂದುತ್ವ ಸಂಕುಚಿತ ಅಲ್ಲ ಎಂಬುದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಸಾಧಿಸಿ ತೋರಿಸುತ್ತಾರೆ. ಆರ್‌ಎಸ್‌ಎಸ್ ಕೇವಲ ಬ್ರಾಹ್ಮಣರದ್ದು ಎಂಬ ತಪ್ಪು ಕಲ್ಪನೆ ಇದೆ. ಆರ್‌ಎಸ್‌ಎಸ್ ಶಾಖೆಗೆ ಹೋಗುತ್ತಿದ್ದ ಕಾರಣಕ್ಕೆ ನಮ್ಮ ತಂದೆ ನಮ್ಮ ಅಣ್ಣನನ್ನು ಹೊಡೆದು ಆಚೆ ಓಡಿಸಿದ್ದರು. ಆದರೆ ಶಿವಮೊಗ್ಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ನರಸಿಂಹ ಅಯ್ಯಂಗಾರ್ ನಮ್ಮ ಅಣ್ಣನಿಗೆ ಆಶ್ರಯ ಕೊಟ್ಟಿದ್ದರು. ಅವರು ತಮ್ಮ ಮಕ್ಕಳೊಂದಿಗೆ ನಮ್ಮ ಅಣ್ಣನನ್ನು ಕೂಡಿಸಿ ಊಟ ಹಾಕುತ್ತಿದ್ದುದನ್ನು ಕಂಡ ಮೇಲೆ ನಮ್ಮ ತಂದೆಗೆ ಜ್ಞಾನೋದಯವಾಯ್ತು. ನಾನು ಗೆದ್ದು ಬರುತ್ತಿರುವ ಕ್ಷೇತ್ರದಲ್ಲಿ ಕುರುಬರ ವೋಟು ಜಾಸ್ತಿಯಿಲ್ಲ. ಬ್ರಾಹ್ಮಣರ ವೋಟ್ ಹೆಚ್ಚಿದೆ. ಆದರೆ ಅವರು ಜಾತಿ ನೋಡದೆ ನನ್ನನ್ನು ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ನಾನು ಆರ್‌ಎಸ್‌ಎಸ್ ಸಂಘಟನೆಯ ಸ್ವಯಂಸೇವಕನಾಗಿ ಸೇರಿಕೊಂಡಿರುವೆ ಎಂದು ಹೇಳಿದರು.

ಎಲ್ಲರನ್ನೂ ಸಮಾನವಾಗಿ ಕಾಣುವುದನ್ನು ಆರ್‌ಎಸ್‌ಎಸ್ ಕಲಿಸುತ್ತದೆ. ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದ ಕಾಗೇರಿ ಅವರು ಸರ್ವರನ್ನು ಸಮಾನವಾಗಿ ಕಾಣುತ್ತಾರೆ. ಯಶಸ್ವಿಯೂ ಆಗುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *