– ಬಾಲಚಂದ್ರ ಜಾರಕಿಹೊಳಿಗೂ ಸಿಗುತ್ತೆ ಮಂತ್ರಿಗಿರಿ
– ಒಂದೇ ವಿಮಾನದಲ್ಲಿ ಬೆಳಗಾವಿಗೆ ಬಂದ ‘ಕೈ’- ಕಮಲ ಶಾಸಕರು
ಬೆಳಗಾವಿ: ಮುಂದಿನ ವಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ನಿಮಗೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಂತ್ರಿಗಿರಿ ಸಿಗುತ್ತೆ. ಸ್ವಲ್ಪ ಕಾಯಿರಿ ಅಂತ ಹೈಕಮಾಂಡ್ ಸೂಚನೆ ನೀಡಿದೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರು ಸಮಾಧಾನವಾದ ಬಳಿಕ ನಾನು ಹಾಗೂ ಬಾಲಚಂದ್ರ ಸಚಿವರಾಗುತ್ತೇವೆ. ಎಲ್ಲರಿಗೂ ಸಚಿವ ಸ್ಥಾನ ಹಂಚಿಕೆ ಮಾಡಿ ನಮಗೆ ಉಳಿಯದಿದ್ದರೆ ನಾವು ಮಂತ್ರಿಯಾಗಲ್ಲ. ಈ ಹಿಂದೆ ಎಂಟೂವರೆ ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಮಂತ್ರಿಯಾಗಬೇಕು ಅಂತ ನನಗೆ ಹಂಬಲವೇನಿಲ್ಲ, ಕೊಟ್ಟರೆ ಜವಾಬ್ದಾರಿಯಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಚಿವ ಲಕ್ಷ್ಮಣ ಸವದಿ ಹಾಗೂ ನಾನು ಇಂದು ಭೇಟಿಯಾಗಿಲ್ಲ. ಭೇಟಿಯಾಗಿದ್ದೇವೆ ಅಂತ ಮಾಧ್ಯಮಗಳು ವರದಿ ಮಾಡಿದರೆ ನಾನೇನು ಮಾಡಲು ಆಗುವುದಿಲ್ಲ. ಯಾರೊಂದಿಗೂ ವೈರತ್ವ ಸಾಧಿಸಲ್ಲ. ಲಕ್ಷ್ಮಣ ಸವದಿ ಅವರು ದಿನಕ್ಕೆ ಮೂರಿ ಬಾರಿ ಫೋನ್ ಮಾಡುತ್ತಾರೆ. ನಾನು ಕೂಡ ಅವರಿಗೆ ಕರೆ ಮಾಡುತ್ತೇನೆ. ಸಚಿವ ಸ್ಥಾನ ಸಿಗದಿದ್ದರೆ ಏನಂತೆ ತಿನ್ನಲು ಉನ್ನಲು ನಮಗೆ ಕಡಿಮೆ ಇಲ್ಲ ಎಂದರು.
ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ, ಬಿಜೆಪಿಯ ಉಮೇಶ್ ಕತ್ತಿ ಹಾಗೂ ಮುರಗೇಶ್ ನಿರಾಣಿ ಅವರು ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದಾರೆ. ಅದರಲ್ಲೂ ಸತೀಶ್ ಜಾರಕಿಹೊಳಿ ಹಾಗೂ ಉಮೇಶ್ ಕತ್ತಿ ಅಕ್ಕಪಕ್ಕದಲ್ಲಿ ಕುಳಿತು ಬಂದಿದ್ದಾರೆ ಎಂದು ಮೂಲಳಿಂದ ಮಾಹಿತಿ ಲಭ್ಯವಾಗಿದೆ.