– ನಾನು ಸಿಎಂ ಹುದ್ದೆಯ ಆಕಾಂಕ್ಷಿ
– ಡಿಎಸಿಂ ಹುದ್ದೆ ಬೇಡವೇ ಬೇಡ
ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವರು ಇನ್ನೂ ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಂದ ಉಪಚುನಾವಣೆ ಫಲಿತಾಂಶದ ಬಳಿಕ ಈ ಪೈಪೋಟಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಮೊದಲಿಂದಲೂ ಸಚಿವ ಸ್ಥಾನ ಬೇಕು ಎನ್ನುತ್ತಿದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಈಗ ಹೊಸ ಬಾಂಬ್ ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು, ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಎಂಟು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಹಿಂದಿನಿಂದಲೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಈಗಲೂ ಮತ್ತೆ ಮುಂದೆಯೂ ನಾನು ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದೇನೆ. ಕೊಡುವುದಾದರೆ ನನಗೆ ಮಂತ್ರಿ ಸ್ಥಾನ ಕೊಡಲಿ. ಇಲ್ಲವಾದರೆ ಮುಖ್ಯಮಂತ್ರಿ ಸ್ಥಾನ ಕೊಡಲಿ. ಆದರೆ ಉಪಮುಖ್ಯಮಂತ್ರಿ ಸ್ಥಾನ ಮಾತ್ರ ಬೇಡವೇ ಬೇಡ ಅಂತ ಉಮೇಶ್ ಕತ್ತಿ ಕಡ್ಡಿ ತುಂಡು ಮಾಡುವಂತೆ ಸ್ಪಷ್ಟಪಡಿಸಿದರು.
Advertisement
Advertisement
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕಣ್ಣಿಟ್ಟ ಉಮೇಶ್ ಕತ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟಿಸಿದೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಇತರೇ ಬಿಜೆಪಿ ಹಿರಿಯ ಶಾಸಕರು ಉಮೇಶ್ ಕತ್ತಿಯವರ ಹೇಳಿಕೆಗೆ ಗಾಬರಿಗೊಂಡಿದ್ದಾರೆ. ಉಮೇಶ್ ಕತ್ತಿ ಅದ್ಯಾವ ಅರ್ಥದಲ್ಲಿ ಸಿಎಂ ಹುದ್ದೆ ಕೇಳುತ್ತಿದ್ದಾರೆ ಅಂತ ಅರ್ಥವಾಗದೇ ಉಳಿದ ಸಚಿವಾಕಾಂಕ್ಷಿಗಳು ಕಣ್ ಕಣ್ ಬಿಡುತ್ತಿದ್ದಾರಂತೆ. ಆದರೆ ಉಮೇಶ್ ಕತ್ತಿ ಹೇಳಿಕೆಯನ್ನು ಯಾರು ಹೇಗೆ ಸ್ವೀಕರಿಸಿದ್ದಾರೋ ಗೊತ್ತಿಲ್ಲ, ಸಿಎಂ ಯಡಿಯೂರಪ್ಪ ಅವರು ಮಾತ್ರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
Advertisement
ಈ ಹಿಂದೆಯೂ ಕಾಂಗ್ರೆಸ್ ಅವಧಿಯಲ್ಲಿ ಉಮೇಶ್ ಕತ್ತಿ ಅವರು ಪ್ರತ್ಯೇಕ ಉತ್ತರ ಕರ್ನಾಟಕ ಮಾಡುವ ಹೇಳಿಕೆ ಕೊಟ್ಟು ವಿವಾದ ಮೆತ್ತಿಕೊಂಡಿದ್ದರು. ಪ್ರತ್ಯೇಕ ನಾಡಧ್ವಜಕ್ಕೂ ಅವರು ಬೇಡಿಕೆ ಇಟ್ಟಿದ್ದರು. ಶಾಸಕ ಈ ನಡೆಯ ಬಗ್ಗೆ ಇಡೀ ಬಿಜೆಪಿ ನಾಯಕರೇ ಬೆಚ್ಚಿಬಿದ್ದಿದ್ದರು. ಅದಾದ ನಂತರ ಇದೀಗ ಉಮೇಶ್ ಕತ್ತಿ ನನಗೂ ಸಿಎಂ ಹುದ್ದೆ ಕೊಡಿ ಅಂತ ಕೇಳುವ ಮೂಲಕ ಮತ್ತೊಮ್ಮೆ ಬಿಜೆಪಿ ಪಾಳಯಕ್ಕೆ ದಿಗಿಲು ಹುಟ್ಟಿಸಿದ್ದಾರೆ.
Advertisement
ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬಂದ ನಂತರ ರಚನೆಗೊಂಡ ಸಚಿವ ಸಂಪುಟದಲ್ಲಿ ಉಮೇಶ್ ಕತ್ತಿ ಸ್ಥಾನ ವಂಚಿತರಾಗಿದ್ದರು. ಆಗಲೇ ಬಂಡಾಯ ಏಳುವ ಸೂಚನೆಯನ್ನೂ ಅವರು ಕೊಟ್ಟಿದ್ದರು. ಆದರೆ ಮುಂದಿನ ಬಾರಿ ಸಚಿವ ಸ್ಥಾನ ಕೊಡುವುದಾಗಿ ಅವರನ್ನು ಸಿಎಂ ಯಡಿಯೂರಪ್ಪ ಅವರೇ ಮನವೊಲಿಸಿದ್ದರು. ಈಗ ಉಪಚುನಾವಣೆಯಲ್ಲಿ ಅನರ್ಹರು ಗೆದ್ದು ಶಾಸಕರಾದ ಬಳಿಕ ಮತ್ತೆ ಉಮೇಶ್ ಕತ್ತಿ ಅವರು ಸಿಎಂ ಯಡಿಯೂರಪ್ಪ ಮೇಲೆ ಸಚಿವ ಸ್ಥಾನಕ್ಕೆ ಪ್ರಬಲವಾಗಿಯೇ ಒತ್ತಡ ಹೇರುತ್ತಿದ್ದಾರೆ. ಈ ಮಧ್ಯೆ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕೆಂಬ ನಿಲುವನ್ನೂ ಸಿಎಂ ಯಡಿಯೂರಪ್ಪ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸಲು ಸಿಎಂ ಯಡಿಯೂರಪ್ಪ ಅವರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಚರ್ಚೆಯ ಬಳಿಕ ನಿರ್ಧಾರ ಸ್ಪಷ್ಟವಾಗಲಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.