ಜನಾರ್ದನ ರೆಡ್ಡಿ ಹೇಳಿಕೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ

Public TV
1 Min Read
BJP MLA Suresh Kumar Janardhan Reddys statement

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಕುರಿತು ಹೇಳಿಕೆ ನೀಡಿದ್ದ ಜನಾರ್ದನ ರೆಡ್ಡಿ ವಿರುದ್ಧ ಬಿಜೆಪಿಯ ಶಾಸಕ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿರೋಧಿ ಬಣದ ನಾಯಕರ ಮಗನ ಸಾವು ಚುನಾವಣಾ ಸಂದರ್ಭದಲ್ಲಿ ಪ್ರಚಾರದ ಸರಕಾಗಿರುವುದು ಅತ್ಯಂತ ಅಮಾನವೀಯ. ಮಗನನ್ನು ಕಳೆದುಕೊಂಡ ಆ ಸಂಕಟ ಯಾರಿಗೂ ಬರದಿರಲಿ. ನಾವು ಮನುಷ್ಯತ್ವ ಕಳೆದುಕೊಳ್ಳದಿರೋಣ ಎಂದು ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ಶಾಸಕರು, ಕರ್ನಾಟಕ ಚುನಾವಣಾ ರಾಜಕೀಯದ ಸಂವಾದ ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುವ ಮೊದಲು ಸಂಬಂಧಪಟ್ಟವರೆಲ್ಲರೂ ಎಚ್ಚರಗೊಳ್ಳುವುದು ಈ ಕ್ಷಣದ ಅಗತ್ಯವಾಗಿದೆ. ಇಲ್ಲದಿದ್ದರೆ ಇನ್ನಷ್ಟು ಅಪಾಯಕಾರಿ ಪದಗಳ ವಿಜೃಂಭಣೆಯ ಕಾಣಲಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಆಗಿದ್ದೇನು?: ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ನನ್ನನ್ನು ನನ್ನ ಮಕ್ಕಳಿಂದ ಸಿದ್ದರಾಮಯ್ಯ 4 ವರ್ಷ ದೂರ ಇರುವಂತೆ ಮಾಡಿದ್ದಾರೆ. ಶ್ರವಣ ಕುಮಾರ ಕೊಂದಾಗ ಆದ ಪುತ್ರನ ಅಗಲಿಕೆ ನೋವು ಗೊತ್ತಾಗಲಿ ಅಂತ ಹೆತ್ತವರು ಶಾಪ ಕೊಟ್ಟಿಟ್ರು. ನನ್ನನ್ನ ನನ್ನ ಮಕ್ಕಳಿಂದ ದೂರ ಮಾಡಿದ ಎಲ್ಲರೂ ಅನುಭವಿಸ್ತಾರೆ. ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ. ಅದೇ ರೀತಿ ಸಿದ್ದರಾಮಯ್ಯಗೆ ದೇವರು ಸರಿಯಾಗಿ ಬುದ್ಧಿ ಕಲಿಸಿದ್ದಾನೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ, ನೀವು ಮಾಡಿರುವ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಅಂತ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗಾಲಿ ಜನಾರ್ದನ ರೆಡ್ಡಿ, ಹಿಂದೂ ವಿರೋಧಿ ಮತ್ತು ನಾಸ್ತಿಕರಾಗಿದ್ದ ನೀವು ಇತ್ತೀಚಿನ ದಿನಗಳಲ್ಲಿ ದೇವರನ್ನು ನಂಬುತ್ತಿರುವುದು ನನಗೆ ಬಹಳ ಖುಷಿಕೊಟ್ಟಿದೆ. ನಿಮಗೆ ಸದ್ಬುದ್ಧಿ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಜನಾರ್ದನ ರೆಡ್ಡಿ ಅವರ ಈ ಹೇಳಿಕೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *