ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಾಸಕ ಸುನೀಲ್ ಕುಮಾರ್ ಪುತ್ರಿಗೆ ಶೇ.97 ಅಂಕ

Public TV
1 Min Read
sunil kumar daughter prerana

ಬೆಂಗಳೂರು/ಉಡುಪಿ: ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ (Sunil Kumar) ಅವರ ಪುತ್ರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಬಂದಿದೆ.

ಪುತ್ರಿಯ ಸಾಧನೆಗೆ ಸುನೀಲ್ ಕುಮಾರ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಮಗಳು ಪ್ರೇರಣಾ ಅವರ ಸಾಧನೆ ವಿಚಾರವನ್ನು ಶಾಸಕರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

SUNIL KUMAR 1

ಫೇಸ್‌ಬುಕ್‌ ಪೋಸ್ಟ್‌ನಲ್ಲೇನಿದೆ?
ಮಗಳೇ ಓದಿಯಾಯ್ತಾ ಎಂದು ಪ್ರಶ್ನಿಸಿದಾಗಲೆಲ್ಲ, ‘ಒಳ್ಳೆ ಮಾರ್ಕ್ಸ್ ತೆಗೆದರೆ ಆಯ್ತಲ್ವಾ ಈಗ ಕಿರಿಕಿರಿ ಮಾಡಬೇಡಿ’ ಎಂದು ಹುಸಿಕೋಪ ಪ್ರದರ್ಶಿಸುತ್ತಿದ್ದಳು ನನ್ನ ಮುದ್ದಿನ ಮಗಳು ಪ್ರೇರಣಾ. ಈಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.97 ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.‌

ಪರೀಕ್ಷೆಯೆಂದರೆ ಮಕ್ಕಳಿಗಿಂತ ಹೆತ್ತವರಿಗೆ ಕಾಳಜಿ ಹೆಚ್ಚು. ಆದರೆ ನಾವೆಂದೂ ಅಂಕ ಗಳಿಕೆಯ ಒತ್ತಡವನ್ನು ಅವಳ ಮೇಲೆ ಹೇರಿರಲಿಲ್ಲ. ಆದರೆ, ತನ್ನ ಜವಾಬ್ದಾರಿಯನ್ನು ಅರಿತು ಪರಿಶ್ರಮದಿಂದ ಓದಿದಳು. ಜ್ಞಾನಸುಧಾದ ಉಪನ್ಯಾಸಕರ ತಂಡ ಸೂಕ್ತ ಮಾರ್ಗದರ್ಶನ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು. ಒಬ್ಬ ವಿಧೇಯ ವಿದ್ಯಾರ್ಥಿನಿಯಾಗಿ ಓದು ಹಾಗೂ ಮುಂದಿನ ಗುರಿಯೆಡೆಗಿನ ನಿನ್ನ ಸ್ಪಷ್ಟತೆಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌, ದಕ್ಷಿಣ ಕನ್ನಡ ಸೆಕೆಂಡ್‌

ವಿದ್ಯಾರ್ಥಿ ಜೀವನದಲ್ಲಿ ಸುಖಕ್ಕಿಂತ ಪರಿಶ್ರಮದ ಹಾದಿ ಮುಖ್ಯ ಎಂಬ ನಮ್ಮ ಕಿವಿ ಮಾತನ್ನು ಸದಾ ಮನಸಿನಲ್ಲಿಟ್ಟುಕೊಂಡಿದ್ದ ಮಗಳು. ಆರು ಬಾರಿ ಪೂರ್ವಸಿದ್ಧತಾ ಪರೀಕ್ಷೆ ಬರೆದು ನಿರಂತರ ಶ್ರಮ ವಹಿಸಿದ್ದಳು. ತನ್ನ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂಬ ಬೇಸರ ಅವಳಿಗಿದ್ದರೂ ತಂದೆಯಾಗಿ ಅವಳ ಈ ಸಾಧನೆ ಸಂತೋಷ ನೀಡಿದೆ. ಮತ್ತೊಮ್ಮೆ ಅಭಿನಂದನೆಗಳು ಮಗನೆ… ಪುಸ್ತಕದ ಪಾಠದಷ್ಟೇ ಜೀವನದ ಪಾಠವೂ ಮುಖ್ಯ. ಆ ಸವಾಲನ್ನು ಅರ್ಥ ಮಾಡಿಕೊಳ್ಳುವುದೇ ನಿಜವಾದ ಭವಿಷ್ಯ ಎಂದು ಮಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸುನೀಲ್‌ ಕುಮಾರ್‌ ಖುಷಿ ವ್ಯಕ್ತಪಡಿಸಿದ್ದಾರೆ.

Share This Article