ಬೆಂಗಳೂರು: ಮೂರು ವಾರಗಳ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಅರ್ಧ ಸಚಿವ ಸಂಪುಟ ರಚನೆಯಾಗಿದೆ. ಈ ಬೆನ್ನಲ್ಲೇ ಹಲವರು ತಮ್ಮ ಅಸಮಾಧಾನ ಹೊರಹಾಕಿದ್ದು ಶಾಸಕ ರಾಜು ಗೌಡ ಕೂಡ ಕೊನೆ ಗಳಿಗೆಯಲ್ಲಿ ನೋಬಾಲ್ ಗೆ ರನೌಟ್ ಆಗಿದ್ದೇ ಬೇಜಾರು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಅದು ಕೈ ತಪ್ಪಿದೆ. ಹೀಗಾಗಿ ನೋಬಾಲ್ ಗೆ ರನೌಟ್ ಆಗಿರುವುದು ನನಗೆ ಬೇಜಾರಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬಹಳಷ್ಟು ಜನ ನನಗೆ ಮಂತ್ರಿ ಸ್ಥಾನ ಸಿಗಲಿ ಎಂದು ಸಹಕರಿಸಿದರು. ಅವರೆಲ್ಲರೂ ಆಸೆ ಪಟ್ಟಿದ್ದರು. ಆದರೆ ನಾನು ಸಚಿವನಾಗಲಿಲ್ಲ. ಇದರಿಂದೇನೂ ಸಮಸ್ಯೆ ಆಗಲ್ಲ. ಯಾರು ನಮಗೆ ಅಡ್ಡ ಬಂದಿದ್ದಾರೋ ಅವರ ಜೊತೆಗೆ ಎಲ್ಲರಿಗೂ ಒಳ್ಳೆಯದಾಗಲಿ. ಯಾರಿಗೂ ಕೆಟ್ಟದು ಬಯಸಲ್ಲ ಎಂದರು.
ನಾನು ಕ್ರೀಡಾಪಟುವಾಗಿದ್ದು, ಹೀಗಾಗಿ ಆಟದಲ್ಲಿ ಸೋಲು-ಗೆಲುವು ಅನುಭವಿಸಿದ್ದೇನೆ. ಆದರೆ ಕ್ರಿಕೆಟ್ ಆಡುವಾಗ ನೋಬಾಲ್ ಗೆ ರನೌಟ್ ಆಗಿದ್ದೇನೆ ಅಂತಷ್ಟೇ ಬೇಜಾರು ಬಿಟ್ಟರೆ ಬೇರಾವುದೂ ಇಲ್ಲ. ಪರವಾಗಿಲ್ಲ ಇನ್ನೊಂದು ಮ್ಯಾಚ್ ಆಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.