ಬೆಂಗಳೂರು: ಜಾತಿನಿಂದನೆ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಗಿದ ಕಾರಣ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಮುಂದೆ ಶಾಸಕ ಮುನಿರತ್ನರನ್ನು ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮುನಿರತ್ನ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೋರಿದರು. ಆದರೆ ಇದಕ್ಕೆ ಮುನಿರತ್ನ ಪರ ವಕೀಲರು ಆಕ್ಷೇಪಿಸಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
Advertisement
ವಿಚಾರಣೆಗೆ ಒಂದು ನೋಟಿಸ್ ನೀಡಿಲ್ಲ. ತಿರುಪತಿಗೆ ಹೋಗುವಾಗ ತರಾತುರಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರಕರಣ ಎಂದು ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. ಅಂತಿಮವಾಗಿ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಆಗಿದೆ.
Advertisement
ಲಂಚ ಹಾಗೂ ಜಾತಿ ನಿಂದನೆ ಆರೋಪದ ಅಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಮುನಿರತ್ನ ಅವರನ್ನು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಎಂಬಲ್ಲಿ ವೈಯ್ಯಾಲಿಕಾವಲ್ ಪೊಲೀಸರು ಶನಿವಾರ ವಶಕ್ಕೆ ಪಡೆದು ಬಂಧಿಸಿದ್ದರು. ಬಂಧನಕ್ಕೊಳಗಾಗಿದ್ದ ಮುನಿರತ್ನ ಅವರನ್ನು ಕೋರ್ಟ್ ಎರಡು ದಿನ ಪೊಲೀಸರ ವಶಕ್ಕೆ ನೀಡಿತ್ತು.