ಬಿಗ್ ಬಾಸ್ ನಿಷೇಧಿಸುವಂತೆ ಬಿಜೆಪಿ ಶಾಸಕನಿಂದ ಕೇಂದ್ರ ಸಚಿವರಿಗೆ ಪತ್ರ

Public TV
2 Min Read
big boss web

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿಯ ಬಿಗ್ ಬಾಸ್‍ನ 13ನೇ ಆವೃತ್ತಿಯ ಪ್ರಸಾರಕ್ಕೆ ತಡೆ ನೀಡಬೇಕೆಂದು ಬಿಜೆಪಿಯ ಗಾಜಿಯಾಬಾದ್ ಶಾಸಕ ನಂದ ಕಿಶೋರ್ ಗುಜ್ಜಾರ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.

ಬಿಗ್ ಬಾಸ್ ಪ್ರದರ್ಶನವು ಅಶ್ಲೀಲತೆಯಿಂದ ಕೂಡಿದೆ, ಅಶ್ಲೀಲತೆಯನ್ನು ಉತ್ತೇಜಿಸುತ್ತದೆ. ಇದು ಕುಟುಂಬ ವೀಕ್ಷಣೆಗೆ ಅನರ್ಹವಾಗಿದೆ. ಅಲ್ಲದೆ ನಮ್ಮ ದೇಶದ ಸಾಂಸ್ಕೃತಿಕಕ ನೀತಿಗೆ ವಿರುದ್ಧವಾಗಿದೆ ಮತ್ತು ಹೆಚ್ಚು ಆಕ್ಷೇಪಾರ್ಹ ದೃಶ್ಯಗಳಿಂದ ಕೂಡಿದೆ. ವಿವಿಧ ಸಮುದಾಯಗಳ ಜೋಡಿಗಳನ್ನು ಬೆಡ್ ಪಾರ್ಟ್‍ನರ್ ಗಳನ್ನಾಗಿ ಮಾಡಲಾಗುತ್ತಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಬಿಜೆಪಿ ಶಾಸಕರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

big boss 2

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದು ಹೋಗಿರುವ ಭಾರತದ ವೈಭವವನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಇಂತಹ ಪ್ರದರ್ಶನಗಳು ದೇಶದ ಸಾಂಸ್ಕೃತಿಯನ್ನು ಕೆಣಕುತ್ತಿವೆ ಎಂದು ಕಿಡಿಕಾರಿದ್ದಾರೆ.

ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಹಾಗೂ ಪ್ರದರ್ಶನಗಳನ್ನು ತಡೆಗಟ್ಟುವ ಸಲುವಾಗಿ ದೂರದರ್ಶನದಲ್ಲಿ ಯಾವುದೇ ವಿಷಯವನ್ನು ಪ್ರಸಾರ ಮಾಡಲು ಸೆನ್ಸಾರ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಕ್ಕಳು ಹಾಗೂ ಅಪ್ರಾಪ್ತ ವಯಸ್ಕರು ದೂರದರ್ಶನ ವೀಕ್ಷಿಸುತ್ತಾರೆ. ವಯಸ್ಕರ ವಿಷಯಗಳಿಂದ ಕೂಡಿದ ಇಂತಹ ಪ್ರದರ್ಶನಗಳಿಗೆ ಸಹಜವಾಗಿಯೇ ಆಕರ್ಷಣೆಗೊಳಗಾಗುತ್ತಾರೆ. ಮನೆಯಲ್ಲಿ ನೋಡುವುದನ್ನು ತಡೆದರೂ ಇದೀಗ ಇಂಟರ್ ನೆಟ್‍ನಲ್ಲಿ ನೋಡಬಹುದಾಗಿದೆ. ಹೀಗಾಗಿ ಇದು ಅಪ್ರಾಪ್ತ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದ್ದಾರೆ.

big boss 5

ಈ ಹಿಂದೆ ಬ್ರಾಹ್ಮಣ ಮಹಾಸಭಾ ಸಹ ತಕ್ಷಣದಿಂದ ಈ ರಿಯಾಲಿಟಿ ಶೋ ನಿಷೇಧ ಮಾಡುವಂತೆ ದೂರು ನೀಡಿತ್ತು. ಈ ಕುರಿತು ಘಾಜಿಯಾಬಾದ್ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿತ್ತು. ಅಲ್ಲದೆ ಉತ್ತರ ಪ್ರದೇಶ ನವ ನಿರ್ಮಾಣ ಸೇನೆಯ ಅಧ್ಯಕ್ಷ ಅಮಿತ್ ಜಾನಿ ಸಹ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಗ್ ಬಾಸ್‍ನ 13ನೇ ಆವೃತ್ತಿಯ ಪ್ರಸಾರ ನಿಲ್ಲಿಸುವವರೆಗೆ ಯಾವುದೇ ಆಹಾರ ಧಾನ್ಯ ತಿನ್ನುವುದಿಲ್ಲ ಎಂದು ಘೋಷಿಸಿದ್ದಾರೆ.

ಅಶ್ಲೀಲತೆಯನ್ನು ಉತ್ತೇಜಿಸುವ ಮತ್ತು ಯುವಕರನ್ನು ದಾರಿ ತಪ್ಪಿಸುವ ಪ್ರದರ್ಶನವನ್ನು ನಿಷೇಧಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ನಾನು ಊಟ ಮಾಡುವುದಿಲ್ಲ ಕೇವಲ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಬದುಕುತ್ತೇನೆ. ರಾಷ್ಟ್ರೀಯ ಮಟ್ಟದ ದೂರದರ್ಶನದಲ್ಲಿ ಹಾಸಿಗೆ ಹಂಚಿಕೊಳ್ಳುವ ಯುವ ಜೋಡಿಗಳನ್ನು ತೋರಿಸುವುದು ಸ್ವೀಕಾರಾರ್ಹವಲ್ಲ. ಆರ್‍ಎಸ್‍ಎಸ್ ಇದನ್ನು ಗಮನಿಸದಿರುವುದು ಆಘಾತದ ವಿಷಯವಾಗಿದೆ ಎಂದು ಹೇಳಿದ್ದಾರೆ.

big boss 4

ಇದು ಬಿಗ್ ಬಾಸ್ ರಿಯಾಲಿಟಿ ಶೋನ 13ನೇ ಆವೃತ್ತಿಯಾಗಿದ್ದು, ಹೆಚ್ಚು ಜನಪ್ರಿಯವಾಗಿದೆ. ಅಲ್ಲದೆ ಈ ರಿಯಾಲಿಟಿ ಶೋ ಸಾಮಾನ್ಯರನ್ನು ಸಹ ಸೆಲೆಬ್ರಿಟಿಗಳನ್ನಾಗಿ ಮಾಡಿದೆ ಎಂಬ ಹೆಗ್ಗಳಿಕೆ ಪಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *