Connect with us

Bagalkot

ಕಾಂಗ್ರೆಸ್ಸಿನ ಅತೃಪ್ತ ಆತ್ಮಗಳ ನಾಯಕ ಸಿದ್ದರಾಮಯ್ಯ- ಕೆ.ಎಸ್.ಈಶ್ವರಪ್ಪ

Published

on

ಬಾಗಲಕೋಟೆ: ಕಾಂಗ್ರೆಸ್ಸಿನ ಅತೃಪ್ತ ಆತ್ಮಗಳ ನಾಯಕ ಸಿದ್ದರಾಮಯ್ಯನವರು ತನ್ನ ಹಿಡಿತದಲ್ಲೇ ಸರ್ಕಾರ ಇರಬೇಕೆಂದು ತಂತ್ರ ಮಾಡುತ್ತಿದ್ದಾರೆಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದು ಅವರಿಗೆ ಚಾಮುಂಡಿ ಕ್ಷೇತ್ರದ ಸೋಲಿನ ಉರಿ ಇನ್ನೂ ನಿಂತಿಲ್ಲ. ಹೇಡಿಯಂತೆ ಸುಮ್ಮನಿರದೇ ತಮ್ಮನ್ನು ಯಾರು ಸೋಲಿಸಿದ್ದಾರೆಂದು ಬಾಯಿ ಬಿಡಲಿ. ಅಲ್ಲದೇ ಹೋಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ದೂರು ನೀಡಲಿ ಎಂದು ಸವಾಲು ಹಾಕಿದರು.

ಆತೃಪ್ತ ಶಾಸಕರನ್ನು ಬಿಜೆಪಿ ಸೇಳಿತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಪಕ್ಷ ಅತೃಪ್ತ ಶಾಸಕರು ಹಾಗೂ ಅತೃಪ್ತ ಸಚಿವರ ಬಳಿ ಹೋಗಲ್ಲ. ಅವರವರೇ ಬಡಿದಾಡಿಕೊಂಡು ಸರ್ಕಾರ ಬಿದ್ದರೆ, ಅದಕ್ಕೆ ಸಿದ್ದರಾಮಯ್ಯನವರೇ ನೇರ ಕಾರಣ. ಕಾಂಗ್ರೆಸ್ಸಿನ ಅತೃಪ್ತ ಆತ್ಮಗಳ ನಾಯಕ ಸಿದ್ದರಾಮಯ್ಯನವರು ತನ್ನ ಹಿಡಿತದಲ್ಲೇ ಸರ್ಕಾರ ಇರಬೇಕೆಂದು ತಂತ್ರ ಮಾಡುತ್ತಿದ್ದಾರೆಂದು ಲೇವಡಿ ಮಾಡಿದರು.

ಸಿಎಂ ಕುಮಾರಸ್ವಾಮಿ ಹಾಗೂ ನಾನು ಒಂದೇ ತಂತಿ ಮೇಲೆ ನಿಂತಿದ್ದೇವೆಂದು ಹೇಳುವ ಅವರು, ಒಮ್ಮೆ ರಾಹುಲ್ ಗಾಂಧಿ ಆಶೀರ್ವಾದವೆಂದು ಹೇಳಿದರೆ, ಮತ್ತೊಮ್ಮೆ ದೇವರ ಆಶೀರ್ವಾದವೆಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮೊದಲು ಅವರಿಗೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ಸಲಹೆ ನೀಡಬೇಕೆಂದು ಮನವಿಮಾಡಿಕೊಂಡರು.

ಸಿಎಂ ಕುಮಾರಸ್ವಾಮಿ ಶೂಟೌಟ್ ಮಾಡಿ ಹೇಳಿಕೆಗೆ ಖಾರವಾಗಿ ಉತ್ತರಿಸಿದ ಅವರು, ಸಿಎಂ ಕುಮಾರಸ್ವಾಮಿ ಹಾಗೂ ಗೂಂಡಾಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಕುಮಾರಸ್ವಾಮಿ ಸಿಎಂ ಆಗಲು ಯೋಗ್ಯರಲ್ಲ. 22 ಜನ ಹಿಂದೂ ಕಾರ್ಯಕರ್ತರ ಕಗ್ಗೊಲೆಯಾದಾಗ ಮೌನವಹಿಸಿದ್ದ ಅವರು, ಈಗ ಕೊಲೆಗಡುಕರನ್ನು ಶೂಟೌಟ್ ಮಾಡಿ ಎಂದು ಬೇಜವಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಅವರ ಮಾತಿಗೆ ಬೆಲೆ ಇಲ್ಲ. ಅಲ್ಲದೇ ಈ ಬಗ್ಗೆ ಸಿಎಂ ಎಚ್‍ಡಿಕೆ ಕೂಡಲೇ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಾಯಿಗೆ ಬಂದಂತೆಯೇ ಮಾತನಾಡುತ್ತಾರೆ. ಮೊದಲು ಹೇಗೆ ಮಾತನಾಡಬೇಕೆಂದು ಸಿಎಂಗೆ ದೇವೇಗೌಡರು ಬುದ್ಧಿ ಹೇಳಲಿ ಎಂದರು.

ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ವಿಚಾರ ಕುರಿತು ಮಾತನಾಡಿ, ಹಿಂದಿನ ಸರ್ಕಾರವೂ ಸಹ ಅಕ್ರಮ ಮರಳುಗಾರಿಕೆಗೆ ನಿಂತಿದ್ದರು. ಅದನ್ನು ತಡೆಯೋದು ಬಿಟ್ಟ ಸಿದ್ದರಾಮಯ್ಯ, ನೀವು ಅಕ್ರಮ ಮಾಡಿಲ್ಲವೇ ಎಂದು ಮೊಂಡು ವಾದ ಮಾಡಿ ಚಾಮುಂಡಿಯಲ್ಲೇ ಸೋತು ಅಧಿಕಾರ ಕಳೆದು ಕೊಂಡರು. ಈಗಲೂ ಅಕ್ರಮ ಮರಳು ದಂಧೆಕೋರರಿಗೆ ಸರ್ಕಾರ ಬೆಂಬಲವಾಗಿ ನಿಂತಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರೂ ಬೆಂಬಲಕ್ಕೆ ನಿಂತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರ ಸಂಕಷ್ಟದ ವಿಚಾರದ ಕುರಿತು ಪ್ರಶ್ನಿಸಿದಾಗ, ಸಿದ್ದರಾಮಯ್ಯ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂದೆ ಜೆಡಿಎಸ್ ನಲ್ಲಿ ಇದ್ದಾಗ ಸಿದ್ದರಾಮಯ್ಯ ಮತ್ತು ಅವರ ಗ್ಯಾಂಗ್ ಇಂದಿರಾಗಾಂಧಿ ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದರು. ಅವರ ಬೈಗುಳಗಳನ್ನು ಹೇಳುವುದಕ್ಕೂ ನಾಚಿಕೆಯಾಗುತ್ತದೆ. ಬಳಿಕ ಕಾಂಗ್ರೆಸ್ ಶಕ್ತಿಯ ಮೇಲೆ ಮುಖ್ಯಮಂತ್ರಿಯಾದರು. ಮತ್ತೆ ಸಿಎಂ ಆಗಬೇಕೆನ್ನುವ ಕನಸು ಅವರಿಗಿದೆ. ಆದರೆ ಅದು ನನಸಾಗಲ್ಲ. ಹೀಗಾಗಿ ಸರ್ಕಾರದಲ್ಲಿ ಅರಾಜಕತೆ ರಾಜಕೀಯಕ್ಕೆ ಇಳಿದಿದ್ದಾರೆ. ಹೀಗೆಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು 35 ಪಕ್ಷಗಳು ಒಂದಾಗಿವೆ. ಕಾಂಗ್ರೆಸ್ ಬಿಟ್ಟು ಬೇರೆ ಯಾವ ಪಕ್ಷದ ನಾಯಕರೂ ಸಹ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ಅಲ್ಲದೇ ಯಾರು ಏನೇ ಪ್ರಯತ್ನ ಮಾಡಿದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *