ತುಮಕೂರು: ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಬೇಜವಾಬ್ದಾರಿಯಿಂದ ಜಿಲ್ಲೆ ಸರ್ವನಾಶವಾಗುತ್ತಿದೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಗುಡುಗಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ತೀವ್ರ ಆರೋಪ ಪ್ರತ್ಯಾರೋಪ ಕೇಳಿ ಬಂದವು. ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ಬರ ಪ್ರಗತಿ ಪರಿಶೀಲನಾ ಸಭೆಗೆ ಶಾಸಕರಿಗೆ ಆಹ್ವಾನ ನೀಡಿರಲಿಲ್ಲ. ಈ ವಿಚಾರವಾಗಿ ಬಿಜೆಪಿ ಶಾಸಕರಾದ ಜೆ.ಸಿ ಮಾಧುಸ್ವಾಮಿ, ಬಿ.ಸಿ ನಾಗೇಶ್ ಮತ್ತು ಡಿಸಿಎಂ ಜಿ. ಪರಮೇಶ್ವರ್ ನಡುವೆ ವಾಗ್ವಾದ ನಡೆಯಿತು.
ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿತ್ತು. ಡಿಸಿಎಂ ಭಾಷಣ ಮುಗಿದ ಕೂಡಲೇ ಶಾಸಕ ಮಾಧುಸ್ವಾಮಿ ಅವರು, ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಅಧಿಕಾರಿಗಳು ನಮಗೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಪರಮೇಶ್ವರ್ ಅವರಿಗೆ ಬೆರಳು ಮಾಡಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಮಾತಿನಿಂದ ಕೋಪಗೊಂಡ ಜಿ.ಪರಮೇಶ್ವರ್, ಆ ರೀತಿ ಮಾತನಾಡಬೇಡ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು. ಹೀಗಾಗಿ ಸಭೆಯಲ್ಲಿ ಕೆಲ ಕಾಲ ಆಕ್ರೋಶದ ವಾತವರಣ ನಿರ್ಮಾಣವಾಯಿತು.