-ಪ್ರಶ್ನಿಸಿದವರ ಮೇಲೆ ಹಲ್ಲೆಗೆ ಮುಂದಾದ
-ದಾವಣಗೆರೆ ಪಾಲಿಕೆ ಸದಸ್ಯೆ ವೀಣಾ ನಂಜಪ್ಪರ ಪುತ್ರನ ಅವಾಂತರ
ದಾವಣಗೆರೆ: ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಮೊಮ್ಮಗ ವೇಗವಾಗಿ ಕಾರ್ ಚಲಾಯಿಸಿ ಅಪಘಾತ ಮಾಡಿದ್ದಾನೆ. ಅತಿ ವೇಗದಿಂದ ಬಂದ ಕಾರ್ ಮನೆಯ ಮುಂಭಾಗದ ಛಾವಣಿಯ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಸ್ಥಳೀಯರು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಶಾಸಕರ ಮೊಮ್ಮಗ ಹಲ್ಲೆಗೂ ಮುಂದಾಗಿದ್ದ ಆರೋಪಗಳು ಕೇಳಿ ಬಂದಿವೆ.
ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್‍ಎ.ರವೀಂದ್ರನಾಥ್‍ರ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಅವರ ಪುತ್ರ ಅರುಣ್ ಕುಮಾರ್ ಕಾರ್ ಅಪಘಾತಕ್ಕೊಳಗಾಗಿದೆ. ದಾವಣಗೆರೆಯ ಹೊರ ವಲಯದಲ್ಲಿನ ಶಾಮನೂರಿನಲ್ಲಿ ಅಪಘಾತ ಸಂಭವಿಸಿದ್ದು, ಸಾರ್ವಜನಿಕರು ಸೇರುತ್ತಿದ್ದಂತೆ ಅರುಣ್ ಕುಮಾರ್ ಕಾರ್ ಬಿಟ್ಟು ಪರಾರಿಯಾಗಿದ್ದಾನೆ. ಚಾಲನೆ ವೇಳೆ ಅರುಣ್ ಕುಮಾರ್ ಮದ್ಯಪಾನ ಮಾಡಿದ್ದ ಎಂದು ಹೇಳಲಾಗುತ್ತಿದೆ. ಅತಿವೇಗದಿಂದ ಬಂದ ಕಾರ್ ಮೊದಲಿಗೆ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಟರ್ನ್ ತೆಗೆದುಕೊಂಡ ಅಲ್ಲಿಯೇ ಮನೆಯ ಮುಂಭಾಗದಲ್ಲಿದ್ದ ಮತ್ತೊಂದು ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಕಾರ್ ನಲ್ಲಿ ಶಾಸಕರ ವಿಧಾನಸೌಧದ ಗೇಟ್ ಪಾಸ್, ಬಿಜೆಪಿ ಬಾವುಟ ಹಾಗೂ ವೀಣಾ ನಂಜಪ್ಪನವರ ಪಾಸ್ ಕೂಡ ಸಿಕ್ಕಿದೆ. ಇಂದು ಬೆಳಗ್ಗೆ ಅಪಘಾತಕ್ಕೊಳಗಾದ ಕಾರ್ ನ್ನು ತೆರವುಗೊಳಿಸಲು ದಾವಣಗೆರೆಯ ವಿದ್ಯಾನಗರ ಪೊಲೀಸರು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಸ್ಥಳೀಯರು ಶಾಸಕ ರವೀಂದ್ರನಾಥ್, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಮತ್ತು ಅರುಣ್ ಕುಮಾರ್ ನನ್ನು ಕರೆಸಬೇಕೆಂದು ಪಟ್ಟು ಹಿಡಿದಿದ್ದಾರೆ. ರಾತ್ರಿಯೇ ಅಪಘಾತ ನಡೆದರೂ ಸ್ಥಳಕ್ಕೆ ಶಾಸಕರಾಗಲಿ ಅಥವಾ ಅವರ ಪುತ್ರಿ ಆಗಮಿಸಿಲ್ಲ. ಕೇವಲ ತಮ್ಮ ಬೆಂಬಲಿಗರು ಮತ್ತು ಪೊಲೀಸರನ್ನ ಕಳುಹಿಸಿದ್ದಾರೆ.
ಶಾಸಕರು ಮತ್ತು ಅವರ ಮೊಮ್ಮಗ ಅರುಣ್ ಕುಮಾರ್ ಸ್ಥಳಕ್ಕೆ ಆಗಮಿಸಬೇಕು. ರಾತ್ರಿ ಹಲ್ಲೆ ಮಾಡಲು ಮುಂದಾಗಿದ್ದರಿಂದ ಕ್ಷಮೆ ಕೇಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೆಲ ಮಹಿಳೆಯರು ಅರುಣ್ ಕುಮಾರ್ ತಾಯಿಯ ವಿರುದ್ಧ ಕಿಡಿಕಾರಿದ್ದು, ವೀಣಕ್ಕ ಅವರೇ ಕೈಮುಗಿದು ನಿಂತುಕೊಂಡ್ರೆ ಆಗಲ್ಲ. ಇಲ್ಲಿ ಬಂದು ನಿಮ್ಮ ಮಗನ ಅವಾಂತರ ನೋಡಿ. ನಮ್ಮ ಮನೆಯ ಮುಂದೆ ಬಂದಿರುವ ಕಾರಿನ ಗಾಜುಗಳನ್ನು ಯಾರು ಸ್ವಚ್ಛಗೊಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.