ಮಂಗಳೂರು: ನನ್ನ ಕ್ಷೇತ್ರದಲ್ಲಿ ಶವ ಸುಡಲು ಬಿಡಲ್ಲ ಎಂದು ಮಂಗಳೂರಿನ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಪೊಲೀಸರಿಗೆ ಆವಾಜ್ ಹಾಕಿದ ಘಟನೆ ನಡೆದಿದ್ದು, ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾದಿಂದ ಸಾವಿಗೀಡಾದ ವೃದ್ಧೆಯ ಶವ ಸುಡಲು ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿನ್ನೆ ತಡರಾತ್ರಿ ಪೇಚಾಟಕ್ಕೆ ಸಿಲುಕಿತ್ತು. ಬಳಿಕ ಪಚ್ಚನಾಡಿಯ ಸ್ಮಶಾನಕ್ಕೆ ಒಯ್ಯಲು ಸಿದ್ಧತೆ ನಡೆಯಿತು. ಅಷ್ಟರಲ್ಲಿ ಅಲ್ಲಿಯೂ ಸಾವಿರಾರು ಜನರು ಸೇರಿದ್ದಲ್ಲದೆ, ಜನರ ಜೊತೆ ಶಾಸಕ ಭರತ್ ಶೆಟ್ಟಿಯೂ ಶವ ಸುಡಲು ವಿರೋಧ ಮಾಡಿದರು.
Advertisement
Advertisement
ನನ್ನ ಕ್ಷೇತ್ರದಲ್ಲಿ ಯಾವುದೇ ಕೊರೊನಾದಿಂದ ಸಾವನ್ನಪ್ಪಿದರ ಶವ ಸುಡಲು ಬಿಡುವುದಿಲ್ಲ. ಸುಟ್ಟರೆ ಏನೂ ಆಗಲ್ಲ ಎಂದು ಗೊತ್ತಿದೆ. ಆದ್ರೂ ಜನರ ಪರ ನಿಲ್ಲುತ್ತೇನೆಂದು ಹೇಳಿ ಪೊಲೀಸರಿಗೆ ಆವಾಜ್ ಹಾಕಿದ್ರು. ಕೊನೆಗೆ ನಡುರಾತ್ರಿಯಲ್ಲಿ ಮಂಗಳೂರಿನ ಎಲ್ಲ ಸ್ಮಶಾನಗಳಲ್ಲಿ ಜನ ಸೇರಿದ್ದಾರೆಂದು ತಿಳಿದ ಅಧಿಕಾರಿ ವರ್ಗ, ಶವವನ್ನು ದೂರದ ಬಂಟ್ವಾಳಕ್ಕೆ ಒಯ್ದರು. ಅಲ್ಲಿಯೂ ಜನರ ವಿರೋಧ ಕೇಳಿ ಬಂದು ಕೊನೆಗೆ ತಡರಾತ್ರಿ 3 ಗಂಟೆ ವೇಳೆಗೆ ಪೊಲೀಸ್ ರಕ್ಷಣೆಯಲ್ಲಿ ಬಂಟ್ವಾಳದ ಕೈಕುಂಜೆ ಎಂಬಲ್ಲಿನ ರುದ್ರಭೂಮಿಯಲ್ಲಿ ಶವ ಸುಡಲಾಯ್ತು.
Advertisement
Advertisement
ಪಚ್ಚನಾಡಿಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಶವ ಸುಡಲು ಬಿಡಲ್ಲ ಎಂದ ವಿಡಿಯೋ ವಿಚಾರ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಲ್ಲದೆ ಜನ ಮತ ಭೇದ ಮರೆತು ಖಂಡಿಸಿದ್ದಾರೆ. ಪಾದರಾಯನಪುರದಲ್ಲಿ ಅಧಿಕಾರಿಗಳ ವಿರುದ್ಧ ರಂಪಾಟ ಮಾಡಿದ್ದ ಶಾಸಕ ಜಮೀರ್ ಅಹ್ಮದ್ ಗಿಂತ ಶವ ಸುಡಲು ಬಿಡದೆ ಜಿಲ್ಲಾಡಳಿತವನ್ನು ಪೇಚಿಗೀಡು ಮಾಡಿದ ಭರತ್ ಶೆಟ್ಟಿ ಏನೂ ಕಮ್ಮಿಯಿಲ್ಲ ಎಂಬ ಟೀಕೆ ಕೇಳಿ ಬಂದಿದೆ. ಕೊರೊನಾ ಮೃತರನ್ನು ವಿದ್ಯುತ್ ಚಿತಾಗಾರದಲ್ಲಿಯೇ ಸುಡಬೇಕೆಂದಿದ್ದರೂ ಜಿಲ್ಲಾಡಳಿತ ಶವ ಮುಂದಿಟ್ಟು ಇಡೀ ಜಿಲ್ಲೆ ಸುತ್ತಾಡಿದ್ದೂ ಜಿಲ್ಲಾಡಳಿತದ ವೈಫಲ್ಯಕ್ಕೆ ಸಾಕ್ಷಿಯಾಯ್ತು. ಘಟನೆ ಬಗ್ಗೆ ಟೀಕಿಸಿದ ಮಾಜಿ ಸಚಿವ ಯು.ಟಿ ಖಾದರ್, ಶಾಸಕ ಭರತ್ ಶೆಟ್ಟಿ ಮನುಷ್ಯತ್ವ ಮರೆತು ವರ್ತಿಸಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಗೊಂದು ಕಪ್ಪು ಚುಕ್ಕೆ, ರಾಜ್ಯದ ಬೇರೆಲ್ಲೂ ಈ ರೀತಿ ಆಗಬಾರದೆಂದು ಖಂಡಿಸಿದರು.