ಬೆಂಗಳೂರು: ನೀನು ಸತ್ತಂಗೆ ಆಡು, ನಾನು ಅತ್ತಂಗೆ ಆಡುತ್ತೇನೆ ಎನ್ನುವಂತೆ ಮೈತ್ರಿ ಸರ್ಕಾರ ನಾಯಕರು ಆಟವಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ನಾನು ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಒಂದು ಪಾಯಿಂಟ್ ಆಫ್ ಆರ್ಡರ್ ಮೇಲೆ 3 ಗಂಟೆಗೂ ಅಧಿಕ ಕಾಲ ಚರ್ಚೆ ಮಾಡಿದ್ದನ್ನು ನೋಡಿದ್ದು ಇದೇ ಮೊದಲು. ಈ ಮೂಲಕ ಆಡಳಿತ ಪಕ್ಷದ ನಾಯಕ ಸಿಎಂ ಅವರು ವಿಶ್ವಾಸ ಮತಯಾಚನೆಯನ್ನು ಮುಂದೂಡುತ್ತಿದ್ದಾರೆ ಎಂದು ದೂರಿದರು.
Advertisement
Advertisement
ಸದನಲ್ಲಿ ಕುಳಿತಿದ್ದ ಆಡಳಿತ ಪಕ್ಷದ ಶಾಸಕರ ಸಂಖ್ಯೆ 94 ಹಾಗೂ ವಿರೋಧ ಪಕ್ಷದ ಶಾಸಕರ ಸಂಖ್ಯೆ 105 ಇತ್ತು. ಇದನ್ನು ನೋಡಿದರೆ ಅವರು ಬಹುಮತ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆದರೂ ಅಧಿಕಾರದಲ್ಲಿ ಮುಂದುವರಿಯಲು ಸುಪ್ರೀಂಕೋರ್ಟ್ ತೀರ್ಪನ್ನು ಮರೆಯುತ್ತಿದ್ದಾರೆ. ಇದೊಂದು ರೀತಿಯಲ್ಲಿ ಮೈತ್ರಿ ಪಕ್ಷಗಳ ನಾಟಕವಾಗಿದ್ದು, ಇದರಲ್ಲಿ ಸ್ಪೀಕರ್ ಪಾಲುದಾರರಾಗಬಾರದು ಎನ್ನುವುದು ನಮ್ಮ ವಿನಂತಿ ಎಂದು ಹೇಳಿದರು.
Advertisement
ಮೈತ್ರಿ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಎಲ್ಲಿಯವರೆಗೂ ಬಹುಮತ ಸಿಗುವುದಿಲ್ಲವೋ ಅಲ್ಲಿಯವರೆಗೆ ವಿಶ್ವಾಸ ಮತಯಾಚನೆಯನ್ನು ಮುಂದೂಡಲಾಗುತ್ತದೆ ಎಂದು ಆಡಳಿತ ಪಕ್ಷದ ಶಾಸಕರು ನನಗೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಏನಾದರು ಮಾಡಲು ಸಾಧ್ಯವೇ ಎಂಬ ಲೆಕ್ಕಾಚಾರವನ್ನು ದೋಸ್ತಿ ನಾಯಕರು ಹಾಕುತ್ತಿದ್ದಾರೆ ಎಂದು ದೂರಿದರು.