ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಇವತ್ತು ಇಡೀ ಪರಿಷತ್ ಕಲಾಪವನ್ನ ನುಂಗಿ ಹಾಕಿತು. ಶಾಸಕ ಯತ್ನಾಳ್, ದೊರೆಸ್ವಾಮಿ ಕ್ಷಮೆ ಕೇಳಬೇಕು ಅಂತ ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಸದನ ಬಾವಿಗಿಳಿದು ಹೋರಾಟ ಮಾಡಿತು. ಎರಡು ಬಾರಿ ಸದನ ಮುಂದೂಡಲಾಯ್ತು. ವಿಪಕ್ಷಗಳು ಪ್ರತಿಭಟನೆ ಕೈ ಬಿಡದ ಹಿನ್ನೆಲೆಯಲ್ಲಿ ಕಲಾಪವನ್ನ ನಾಳೆಗೆ ಮುಂದೂಡಲಾಯ್ತು.
Advertisement
ಬೆಳಗ್ಗೆ ಕಲಾಪ ಆರಂಭವಾಗುತ್ತಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಂತಾಪ ಸೂಚನೆ ಬಳಿಕ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ಪ್ರಸ್ತಾಪ ಮಾಡಿದ್ರು. ಸ್ವಾತಂತ್ರ್ಯ ಹೋರಾಟಗಾರಿಗೆ ಶಾಸಕರು ಅಪಮಾನ ಮಾಡಿದ್ದಾರೆ. ಇದು ಗಾಂಧಿಜೀಗೆ ಮಾಡಿದ ಅಪಮಾನ. ಕೂಡಲೇ ಯತ್ನಾಳ್ ದೊರೆಸ್ವಾಮಿ ಅವರ ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದ್ರು. ಆದ್ರೆ ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಯತ್ನಾಳ್ ಈ ಮನೆಯ ಸದಸ್ಯರಲ್ಲ. ಈ ಬಗ್ಗೆ ಚರ್ಚೆ ಬೇಡ ಅಂತ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳು ಸದನದ ಬಾವಿಗಿಳಿದು ಹೋರಾಟ ಮಾಡಿದವು. ಯತ್ನಾಳ್ ವಿರುದ್ಧ ಘೋಷಣೆ ಕೂಗಿದವು. ಪರಸ್ಪರ ಎರಡು ಪಕ್ಷದ ಸದಸ್ಯರು ಭಿತ್ತಿ ಪತ್ರ, ಫೋಟೋಗಳನ್ನ ಹಿಡಿದು ಗಲಾಟೆ ಮಾಡಿದ್ರು.ಗದ್ದಲ ಗಲಾಟೆ ಹಿನ್ನೆಲೆ ಸಭಾಪತಿಗಳು ಕಲಾಪ ಮಧ್ಯಾಹ್ನಕ್ಕೆ ಮುಂದೂಡಿದ್ರು.
Advertisement
Advertisement
ಮಧ್ಯಾಹ್ನ ಬಳಿಕ ಪ್ರಾರಂಭವಾದ ಕಲಾಪದಲ್ಲೂ ವಿಪಕ್ಷ ಧರಣಿ ಮುಂದುವರಿಸಿತು. ಯತ್ನಾಳ್ ವಿರುದ್ಧ ಪ್ರತಿಭಟನೆ ಮುಂದುವರೀತು. ಮತ್ತೆ ಕಲಾಪವನ್ನ ಸಂಜೆಗೆ ಮುಂದೂಡಲಾಯ್ತು. ಸಂಜೆ ಬಳಿಕ ಮತ್ತೆ ಕಲಾಪ ಆರಂಭವಾದಾಗಲೂ ವಿಪಕ್ಷಗಳು ಪ್ರತಿಭಟನೆ ಮುಂದುವರೆಸಿದವು. ಗದ್ದಲ ಗಲಾಟೆ ಹಿನ್ನೆಲೆಯಲ್ಲಿ ಕಲಾಪವನ್ನ ನಾಳೆಗೆ ಮುಂದೂಡಲಾಯ್ತು.