Connect with us

Crime

22 ವರ್ಷದ ಹಳೆಯ ಶೂಟೌಟ್ ಪ್ರಕರಣ – ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

Published

on

ಅಲಹಾಬಾದ್: 22 ವರ್ಷ ಹಿಂದೆ ನಡೆದಿದ್ದ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಶುಕ್ರವಾರದಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಬಿಜೆಪಿ ಶಾಸಕ ಸೇರಿ ಒಟ್ಟು 9 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಶೋಕ್ ಸಿಂಗ್ ಚಂದೇಲ್ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.

1997 ಜನವರಿ 26ರಂದು ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಶೂಟೌಟ್ ನಡೆದಿತ್ತು. ಬಿಜೆಪಿ ನಾಯಕರಾದ ರಾಜೀವ್ ಶುಕ್ಲಾ ಮತ್ತು ಅವರ ಇಬ್ಬರು ಸಹೋದರರಾದ ರಾಕೇಶ್ ಮತ್ತು ರಾಜೇಶ್, 9 ವರ್ಷದ ಸಹೋದರಿಯ ಮಗು ಅಂಬುಜ್, ವೇದ್ ನಾಯಕ್ ಮತ್ತು ಶ್ರೀಕಾಂತ್ ಪಾಂಡೆ ಅವರ ಹತ್ಯೆ ನಡೆದಿತ್ತು. ಇಬ್ಬರು ಮಕ್ಕಳು ಸೇರಿದಂತೆ ಐವರು ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದರು.

ಈ ಐದು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಹಾಲಿ ಎಂಎಲ್‍ಎ ಅಶೋಕ್ ಚಂದೇಲ್ ಸೇರಿದಂತೆ 10 ಮಂದಿ ಭಾಗಿಯಾಗಿದ್ದರು ಎಂದು ಆರೋಪ ಕೇಳಿಬಂದಿತ್ತು. ಆದರೆ 22 ವರ್ಷಗಳ ಕಾಲ ವಿವಿಧ ನ್ಯಾಯಲಯಗಳಲ್ಲಿ ಸುದೀರ್ಘ ವಿಚಾರಣೆ ನಡೆದ ಬಳಿಕ ಶುಕ್ರವಾರ ತೀರ್ಪು ಹೊರಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್ ಚಂದೇಲ್, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಮಾಜಿ ಸಂಸದ ಚಂದೇಲ್ ಹಮೀರ್‌ಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರು 1989ರಲ್ಲಿ ಸ್ವತಂತ್ರ ಶಾಸಕರಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದರು. 1999 ರಲ್ಲಿ ಬಿಎಸ್‍ಪಿ  ಟಿಕೆಟ್ ನಲ್ಲಿ ಹಮೀರ್‌ಪುರದ ಎಂಪಿ ಆಗಿದ್ದರು. ಪ್ರಸ್ತುತ ಅವರು ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದಾರೆ.

Click to comment

Leave a Reply

Your email address will not be published. Required fields are marked *