– ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ
– ಎಚ್‍ಡಿಕೆ ವಿರುದ್ಧ ಗುಡುಗಿದ ವಸತಿ ಸಚಿವರು
– ನಾನು ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ
ಚಿಕ್ಕಬಳ್ಳಾಪುರ: ನಾನು ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಸೋಮಣ್ಣ ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದವನು ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಸಚಿವರು ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ಕಿಡಿಕಾರಿದರು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಸ್ಕಾರ ಇಲ್ಲ, ನಾಲಿಗೆಗೆ ಹಿಡಿತ ಇಲ್ಲ. ನಾನು ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದನ್ನು ಅವರು ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ. ಅಂತಹ ಯಾವುದೇ ಘಟನೆಗಳು ನನ್ನ ಜೀವನದಲ್ಲಿ ನಡೆದಿಲ್ಲ. ನನ್ನ ಜೀವನ ತೆರೆದ ಪುಸ್ತಕ. ಒಂದು ವೇಳೆ ನಾನು ಬಜಾರ್ ನಲ್ಲಿ ಬಟ್ಟೆ ಕದ್ದಿದ್ದೇನೆ ಎನ್ನುವುದನ್ನು ದೃಢಪಡಿಸದಿದ್ದರೆ ಕುಮಾರಸ್ವಾಮಿ ಅವರನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಇಂತಹ ಪಾಪದ ಮಾತುಗಳನ್ನ ಆಡುವುದರಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಿಟ್ ಅಂಡ್ ರನ್ ಅಂತ ಕರೆಯುತ್ತಾರೆ. ಮಾಜಿ ಸಿಎಂ ಆದವರು ಸಂಸ್ಕಾರ ಇಲ್ಲದೆ ಮಾತನಾಡುವುದು ಎಷ್ಟು ಸರಿ ಅಂತ ಅರ್ಥ ಮಾಡಿಕೊಳ್ಳಬೇಕು. ದಿಕ್ಕು ದಿಸೆಯಿಲ್ಲದೆ ಏನೋ ಒಂದು ಹೇಳುವುದು ಎಚ್.ಡಿ.ಕುಮಾರಸ್ವಾಮಿ ಅವರ ಜಾಯಮಾನ. ಆ ತರಹದ್ದು ಏನಾದ್ರೂ ಇದ್ದರೆ, ಧೃಡಪಡಿಸಿದರೆ ಒಂದು ಸೆಕೆಂಡ್ ಕೂಡ ನಾನು ಜೀವಂತವಾಗಿ ಇರುವುದಿಲ್ಲ ಎಂದು ಹೇಳಿದರು.
ಎಚ್‍ಡಿಡಿ ರಾಷ್ಟ್ರದ ಸಂಪತ್ತು:
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಷ್ಟ್ರದ ದೊಡ್ಡ ನಾಯಕರು, ರಾಷ್ಟ್ರದ ಸಂಪತ್ತು. ಅವರು ರಾಜ್ಯ ಹಾಗೂ ನಮ್ಮಂತಹ ನಾಯಕರಿಗೆ ಮಾರ್ಗದರ್ಶನ ಮಾಡಲಿ. ಯಾವುದೇ ಪಕ್ಷಕ್ಕೆ ಅವರು ಸೀಮಿತವಾಗುವುದು ಬೇಡ. ಎಚ್.ಡಿ.ದೇವೇಗೌಡರ ಆಶೀರ್ವಾದ ಎಲ್ಲಿರಿಗೂ ಬೇಕು ಎಂದು ಹೊಗಳಿದರು.
ಎಚ್.ಡಿ.ದೇವೇಗೌಡ ಅವರನ್ನ ಮುಖ್ಯಮಂತ್ರಿ ಮಾಡಿದಾಗ ಎಚ್.ಡಿಕುಮಾರಸ್ವಾಮಿ ಎಲ್ಲಿದ್ದರು. ಕಾರ್ಪೊರೇಷನ್‍ನಲ್ಲಿ ಗುತ್ತಿಗೆದಾರರಾಗಿದ್ದರು. ದೇವೇಗೌಡರು ಸಿಎಂ ಆಗಬೇಕಾದರೆ ನನ್ನ ಶ್ರಮ ಎಷ್ಟಿತ್ತು. ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿಗಳ ಸಂದೇಶ ಏನಿತ್ತು. ಅದು ನನಗೆ ಗೊತ್ತು. ಈ ಕುಮಾರಸ್ವಾಮಿ ಅವರಿಗೆ ಏನು ಗೊತ್ತು ಎಂದು ಗುಡುಗಿದರು.
ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ:
ನಾನು ನಮ್ಮ ಅಮ್ಮ-ಅಪ್ಪ, ಗುರುಗಳು ಹಾಗೂ ದೇವೇಗೌಡರ ಕಾಲಿಗೆ ಬಿದ್ದಿದ್ದೇನೆ. ದಸರಾ ಮುಗಿದ ಮೇಲೆ ದೇವೇಗೌಡರು ಸಿಕ್ಕಿದ್ದರು. ಎಂತಹ ಒಳ್ಳೆಯ ಕೆಲಸ ಮಾಡಿದೆ ಅಂತ ಅಭಿನಂದಿಸಿದ್ದರು. ಅವರ ಮಗ ಎನ್ನುವ ಅರ್ಹತೆ ಬಿಟ್ಟರೆ ನಿಮಗೆ ಬೇರೇನು ಅರ್ಹತೆ ಇಲ್ಲ. ಆದರೆ ಬೇರೆ ಯಾರೂ ದೇವೇಗೌಡರ ಹೆಸರು ಹೇಳುವಂತಿಲ್ಲ ಎನ್ನುವ ಅಧಿಕಾರ ನಿಮಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಎಷ್ಟರ ಮಟ್ಟಿಗೆ ನಡೆಸಿಕೊಂಡರು ಎನ್ನುವುದು ನನಗೆ ಗೊತ್ತು. ನಮ್ಮ ಕಣ್ಣು ಮುಂದೆಯೇ ನೂರಾರು ನಿದರ್ಶನಗಳಿವೆ. ನಾನು ಅದನ್ನ ಹೇಳುವುಕ್ಕೆ ಹೋಗುವುದಿಲ್ಲ. ನಾನು ಬೆಂಗಳೂರಿಗೆ ಬಂದು 54 ವರ್ಷ, ರಾಜಕೀಯಕ್ಕೆ ಪ್ರವೇಶಿಸಿ 40 ವರ್ಷ ಆಯಿತು. ನಿಮ್ಮಂತ ಲಜ್ಜೆಗೆಟ್ಟ ಕೆಲಸಗಳನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.
ಎಚ್.ಡಿ.ದೇವೇಗೌಡ ಅವರನ್ನ ನನ್ನ ತಂದೆ ಹಾಗೂ ಹಿರಿಯರಾಗಿಯೂ ನೋಡಿದ್ದೇನೆ. ನನ್ನ ಅವರ ಬಾಂಧವ್ಯ ಚೆನ್ನಾಗಿದೆ. ನೀವು ಅವರ ಮಗ ಆಗದಿದ್ರೇ ಏನಾಗಬಿಡ್ತಿದ್ರೀ? ಅರ್ಥ ಮಾಡಿಕೊಳ್ಳಿ. ನಮಗೆ ನಮ್ಮ ತಂದೆ ತಾಯಿ ಸಂಸ್ಕಾರ ಕಲಿಸಿದ್ದಾರೆ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಸಲ್ಲದ ಕ್ಷುಲ್ಲಕ ಆರೋಪ ಮಾಡಿ ಇನ್ನೊಬ್ಬರ ಮನಸ್ಸು ನೋಯಿಸುವ ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ. ಅದಕ್ಕೆ ಯಾರೂ ನಿಮ್ಮನ್ನ ನಂಬ್ತಾ ಇಲ್ಲ. ಇಂತಹ ದುರಂಹಕಾರದ ಅವಹೇಳನಕಾರಿಯಾಗಿ ಕೆಟ್ಟಮಟ್ಟದ ರೀತಿಯಲ್ಲಿ ಮಾತನಾಡುವುದು ನಿಲ್ಲಿಸಿ. ನಿಮ್ಮದು ಒಂದಲ್ಲ ನೂರಾರು ಇವೆ. ನಾವೇನಾದರೂ ಹೇಳಿದರೆ ನಿಮ್ಮ ಗೌರವ ಏನಾಗುತ್ತೆ ತಿಳಿದುಕೊಳ್ಳಿ. ಕುಮಾರಸ್ವಾಮಿಯವರೇ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳಿ. ನಾನು ನಿಮಗೆ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದನ್ನು ಅರಿತುಕೊಳ್ಳಿ. ಇಂತಹ ಇಲ್ಲದ ಹೇಳಿಕೆಗಳನ್ನ ಕೊಡಬೇಡಿ. ತಪ್ಪು ಮಾಡಿದ್ದರೆ ಹೇಳಿ. ನನ್ನ ದೇಹತ್ಯಾಗಕ್ಕೂ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.