– ಕೃಷ್ಣನ ಆಶೀರ್ವಾದ ಇದ್ರೆ ಡಿಸಿಎಂ ಆಗ್ತೀನಿ
ಉಡುಪಿ: ಆರೋಗ್ಯ ಸಚಿವ ಶ್ರೀರಾಮುಲು ಅವರು ಡಿಸಿಎಂ ಲಕ್ಷ್ಮಣ ಸವದಿ ಪರ ಬ್ಯಾಟ್ ಬೀಸಿ, ನಮ್ಮ ಕಡೆ ಭಾಷೆನೇ ಹಂಗೆ ಎಂದು ಹೇಳಿದ್ದಾರೆ.
ಅವಾಚ್ಯ ಪದಗಳಿಂದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಡಿಸಿಎಂ ಅವಮಾನಿಸಿದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಅದೇನೂ ಗಂಭೀರ ವಿಚಾರ ಅಲ್ಲ. ಉತ್ತರ ಕರ್ನಾಟಕದ ಆಡು ಭಾಷೆನೇ ಹಂಗೆ ಇರೋದು. ಕುಮಟಳ್ಳಿ ಅವರಿಗೆ ನಾನು ಸಮಾಧಾನ ಮಾಡುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.
‘ನಮ್ ಕಡೆ ಹೆಂಗ್ ಮಾತಾಡ್ತಾರೆ ಅಂತ ನೀವು ಊಹಿಸಲೂ ಸಾಧ್ಯವಿಲ್ಲ. ನಮ್ ಆಡುಮಾತಿಗೆ ಯಾರೂ ತಪ್ಪು ಭಾವಿಸಲ್ಲ. ಈ ಕಡೆ ಮಂದಿ ನಮ್ ಮಾತು ಕೇಳಿದ್ರೆ ಎದೆ ಒಡ್ಕೋತೀರಿ. ಲಕ್ಷ್ಮಣ ಸವದಿ ಅವರು ಉದ್ದೇಶ ಪೂರ್ವಕವಾಗಿ ಮಾತನಾಡಿರಲ್ಲ. ನಾವು ಇನ್ನೂ ಬೇರೆ ಬೇರೆ ಶಬ್ದ ಮಾತಾಡಿರ್ತೀವಿ. ನಮ್ ಕಡೆ ಮಂದಿ ಅಭ್ಯಾಸ ಅಷ್ಟೇ. ಕುಮಟಳ್ಳಿಯವರು ಮಿಸ್ ಅಂಡರ್ ಸ್ಟಾಡಿಂಗ್ ಮಾಡ್ಕೊಂಡಿರಬಹುದು’ ಎಂದು ನಗುತ್ತಲೇ ಹೇಳಿದರು.
ಮಹೇಶ್ ಕುಮಟಳ್ಳಿ ಹಾಗೂ ಲಕ್ಷ್ಮಣ ಸವದಿ ನಮ್ಮ ಸ್ನೇಹಿತರು. ಏನಾದ್ರೂ ಗೊಂದಲ ಇದ್ದರೆ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಉಪ ಮುಖ್ಯಮಂತ್ರಿ ಆಕಾಂಕ್ಷೆ ಹೊರ ಹಾಕಿದ ಸಚಿವರು, ಕೃಷ್ಣನ ದಯೆ ಹೇಗಿದೆಯೋ ನೋಡೋಣ. ಕೃಷ್ಣನ ಆಶೀರ್ವಾದ ಇದ್ದರೆ ಡಿಸಿಎಂ ಆಗುತ್ತೇನೆ ಎಂದು ನಸುನಕ್ಕು ಮಾಧ್ಯಮಗಳಿಗೆ ಕೈಮುಗಿದರು.
ಸವದಿ ಹೇಳಿದ್ದೇನು?
ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅಥಣಿ ಮತ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದಾರೆ. ಸವದಿ ತಮ್ಮ ಬೆಂಬಲಿಗನ ಜೊತೆ ಮೊಬೈಲ್ ಮಾತನಾಡುತ್ತಾ ಕುಮುಟಳ್ಳಿ ವಿರುದ್ಧ ಆಕ್ಷೇಪಾರ್ಹ ಮಾತಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದಿದ್ದರು.
ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರದ ಆಸ್ತಿತ್ವಕ್ಕೆ ಮಹೇಶ್ ಕುಮುಟಳ್ಳಿ ಬಲ ತುಂಬಿದ್ದರು. ಆದರೆ ಇದೀಗ ಅವರ ವಿರುದ್ಧವೇ ಡಿಸಿಎಂ ಗರಂ ಆಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.