Connect with us

Bengaluru City

ಅಧಿಕಾರದಲ್ಲಿ ಮುಂದುವರಿದಿದ್ರೆ ಕೊಲೆಗಡುಕರಿಗೆ ಪ್ರಶಸ್ತಿ ಕೊಡ್ತಿದ್ರು: ಸಿದ್ದುಗೆ ಸಿಟಿ ರವಿ ತಿರುಗೇಟು

Published

on

– ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಸಚಿವರು

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿದಿದ್ದರೆ ಕೊಲೆಗಡುಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿದ್ದರು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಿ.ಟಿ.ರವಿ ಅವರ ಮಧ್ಯೆ ಬೆಳಗ್ಗೆಯಿಂದಲೇ ಟ್ವೀಟ್ ವಾರ್ ಆರಂಭವಾಗಿದೆ. ಟ್ವೀಟ್ ಮೂಲಕವೇ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಸಚಿವರು ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.

ಟ್ವೀಟ್ ಮಾಡಿರುವ ಸಚಿವರು, ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎನ್ನುವ ಮೂಲಕ ತಮಗೆ ಮಾನಸಿಕ ಅಸ್ವಸ್ಥತೆ ಇರುವುದನ್ನು ಸಿದ್ದರಾಮಯ್ಯ ಅವರು ಸಾಬೀತುಪಡಿಸಿದ್ದಾರೆ. ಈ ಮಹಾನುಭಾವರು ಅಧಿಕಾರದಲ್ಲಿ ಮುಂದುವರಿದಿದ್ದರೆ ಕುಡುಕರಿಗೆ, ಕೊಲೆಗಡುಕರಿಗೆ ಮತ್ತು ಸಮಾಜಘಾತುಕರಿಗೆ ತಮ್ಮ ಕಯ್ಯಾರೆ ರಾಜ್ಯೋತ್ಸವ ಪ್ರಶಸ್ತಿಯನ್ನು ದಯಪಾಲಿಸುತ್ತಿದ್ದರೋ ಏನೋ ಎಂದು ಕುಟುಕಿದ್ದಾರೆ.

ಮಹಾತ್ಮ ಗಾಂಧೀಜಿ ಅವರು ವಿ.ಡಿ.ಸಾವರ್ಕರ್ ಅವರನ್ನು ಭಾರತದ ನಿಷ್ಠಾವಂತ ಮಗ ಎಂದು ಕರೆದಿದ್ದಾರೆ. ಜೊತೆಗೆ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ, ಪ್ರತಿಭೆಯನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳಿ ಎಂದು ಗಾಂಧೀಜಿ ತಿಳಿಸಿದ್ದಾರೆ. ವೀರ್ ಸಾವರ್ಕರ್ ಬಗ್ಗೆ ಬಹಿರಂಗ ಚರ್ಚೆಗೆ ನಡೆಯಲಿ. ನಿಮಗೆ ತಾಕತ್ತು ಇದ್ರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಚಿವ ಸಿ.ಟಿ.ರವಿ, ಮಹಾತ್ಮ ಗಾಂಧೀಜಿ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದವರಲ್ಲಿ ಸಾವರ್ಕರ್ ಕೂಡ ಒಬ್ಬರು ಎಂದು ಹೇಳುತ್ತೀರಿ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ನೀವು ಮಾನಸಿಕ ಅಸ್ವಸ್ಥರಾಗಿದ್ದೀರಿ. ಇತಿಹಾಸದ ಬಗ್ಗೆ ನಿಮಗೆ ಅರಿವಿದೆಯಾ? ನೀವ್ಯಾಕೆ ಸೆಲ್ಯೂಲರ್ ಜೈಲಿಗೆ ಹೋಗಬಾರದು. ನಾನೇ ಸ್ಪಾನ್ಸರ್ ಮಾಡುತ್ತೇನೆ ಎಂದು ಗುಡುಗಿದ್ದರು.

ಸಚಿವರ ಹೇಳಿಕೆಯಿಂದ ಗರಂ ಆಗಿದ್ದ ಸಿದ್ದರಾಮಯ್ಯ ಅವರು, ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂದು ಟ್ವೀಟ್ ಮಾಡಿದ್ದರು.

ಮತ್ತೊಂದು ಟ್ವೀಟ್‍ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ ಎಂದು ಕುಟುಕಿದ್ದರು.

Click to comment

Leave a Reply

Your email address will not be published. Required fields are marked *