ಕೋಲ್ಕತ್ತಾ: ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಭದ್ರತಾ ಪಡೆ ಸಮವಸ್ತ್ರದಲ್ಲಿ ರಾಜ್ಯಕ್ಕೆ ಬಂದಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸುವ ಮೂಲಕ ಬಿಜೆಪಿ ತನ್ನ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ರಾಜ್ಯಕ್ಕೆ ಕಳುಹಿಸಿದೆ. ಈ ಮೂಲಕ ಭದ್ರತಾ ಪಡೆಯ ಸಮಸ್ತ್ರದಲ್ಲಿರುವ ಆರ್‍ಎಸ್‍ಎಸ್ ಕಾರ್ಯಕರ್ತರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಸಂದೇಹ ಎದುರಾಗಿದೆ ಎಂದು ದೂರಿದ್ದಾರೆ.
ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಿಯೋಜನೆಯಾಗಿರುವ ಭದ್ರತಾ ಪಡೆಯ ಕೆಲವು ಸಿಬ್ಬಂದಿ ಬಿಜೆಪಿಗೆ ಮತ ಹಾಕುವಂತೆ ಮತದಾರರಿಗೆ ಹೇಳಿದ್ದಾರೆ. ಅವರು ಹೀಗೆ ಮತದಾರರಿಗೆ ಸೂಚನೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೆಲವು ನಿವೃತ್ತ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದೆ. ಅವರು ಬಿಜೆಪಿಗೆ ಮತ ಹಾಕುವಂತೆ ಮತದಾರರಿಗೆ ಹೇಳುತ್ತಿದ್ದಾರೆ. ಅಂತಹ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಸದ್ಯ ನೀವು ಬಿಜೆಪಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರಬಹುದು. ಆದರೆ ನಾಳೆ ಮತ್ತೊಬ್ಬರ ಆಡಳಿತದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎನ್ನುವುದನ್ನು ಮರೆಯಬೇಡಿ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಪಶ್ಚಿಮ ಬಂಗಾಳ, ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲಿ ಇಂದು ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನವು ನಡೆಯಿತು. ಪಶ್ಚಿಮ ಬಂಗಾಳದಲ್ಲಿ ಶೇ.80.16, ದೆಹಲಿ ಶೇ.56.11, ಹರ್ಯಾಣ ಶೇ.62.91, ಉತ್ತರ ಪ್ರದೇಶ ಶೇ.53.37, ಬಿಹಾರ ಶೇ.59.29, ಜಾರ್ಖಂಡ್ ಶೇ.64.46 ಹಾಗೂ ಮಧ್ಯಪ್ರದೇಶ ಶೇ.60.40 ರಷ್ಟು ಮತದಾನವಾಗಿದೆ.
ಕೊನೆ ಹಂತದ ಮತದಾನವು ಮೇ 19ರಂದು ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.
Lok Sabha Election 2019: Total 61.14% voting till 7 pm in #Phase6. West Bengal- 80.16, Delhi-56.11, Haryana- 62.91, Uttar Pradesh- 53.37, Bihar- 59.29, Jharkhand- 64.46, Madhya Pradesh- 60.40 pic.twitter.com/XQbDd1NWHL
— ANI (@ANI) May 12, 2019