ನವದೆಹಲಿ: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ದೆಹಲಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ (BJP) ಸೋಮವಾರ (ಫೆ.17) ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಉನ್ನತಮಟ್ಟದ ಸಭೆ ಆಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರ ನೇತೃತ್ವದಲ್ಲಿ ದೆಹಲಿ ಪ್ರಧಾನ ಕಚೇರಿಯಲ್ಲಿ ನಿರ್ಣಾಯಕ ಸಭೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಕ್ಷದ ಎಲ್ಲಾ ಶಾಸಕರು ಹಾಗೂ ದೆಹಲಿಯ ಎಲ್ಲಾ 7 ಸಂಸದರೂ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಭೆಯಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದು, ಮಂಗಳವಾರ (ಫೆ.18) ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲಾ ಎನ್‌ಡಿಎ ಮೈತ್ರಿಕೂಟದ ನಾಯಕರು ಭಾಗವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದೆಹಲಿಯ ನೂತನ ಸಿಎಂ ಯಾರು?
ಸದ್ಯ ದೆಹಲಿ ಸಿಎಂ ಪಟ್ಟಕ್ಕೆ ಹಲವರ ಹೆಸರು ರೇಸ್‌ನಲ್ಲಿವೆ. ನವದೆಹಲಿ ಕ್ಷೇತ್ರದಲ್ಲಿ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಮತ್ತು ಕಲ್ಕಾಜಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅತಿಶಿ ಅವರನ್ನು ಸೋಲಿಸಿದ ರಮೇಶ್ ಬಿಧೂರಿ ಸೇರಿದಂತೆ ಐವರ ಹೆಸರು ರೇಸ್‌ನಲ್ಲಿದೆ. ಇದರೊಂದಿಗೆ ಬಿಜೆಪಿ ಸಂಸದ ಮನೋಜ್ ತಿವಾರಿ, ಕಪಿಲ್ ಮಿಶ್ರಾ, ಆಶಿಶ್ ಸೂದ್, ರೇಖಾ ಗುಪ್ತಾ, ಮತ್ತು ವಿಜೇಂದರ್ ಗುಪ್ತಾ ಅವರ ಹೆಸರುಗಳೂ ಕೇಳಿಬಂದಿವೆ.