ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಹಿನ್ನಲೆಯಲ್ಲಿ ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯನ್ನು ದೇಶದ ಜನರ ಮುಂದೆ ಇಟ್ಟಿದ್ದು ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಿದೆ. ಈ ನಡುವೆ ಬಿಜೆಪಿಯ ಪ್ರಣಾಳಿಕೆ (Manifesto) ಬಿಡುಗಡೆ ಯಾವಾಗ ಎಂಬ ಕುತೂಹಲ ಹೆಚ್ಚಿದ್ದು ಅದಕ್ಕೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್ (Rajnath Singh) ಉತ್ತರವನ್ನು ಕೊಟ್ಟಿದ್ದಾರೆ.
ಸುದ್ದಿ ವಾಹಿನಿವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಇನ್ನು ಏಳೆಂಟು ದಿನದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಈಗಾಗಲೇ ಬಹುತೇಕ ಕೆಲಸ ಮುಗಿದಿದ್ದು ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಪ್ರಣಾಳಿಕೆ ಜಾರಿಗೆ ಯೋಗ್ಯವಾಗಿರಬೇಕು, ಭರವಸೆ ನೀಡಿದ ಮೇಲೆ ಈಡೇರಿಸುವಂತಿರಬೇಕು ಆ ದೃಷ್ಟಿಕೋನದಲ್ಲಿ ನಾವು ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಮಪತ್ರ ತಿರಸ್ಕೃತ – ನ್ಯಾಯಾಂಗ ತನಿಖೆಗೆ ಒತ್ತಾಯ
ಪ್ರಣಾಳಿಕೆಯಲ್ಲಿ ಏನೆಲ್ಲ ಅಂಶಗಳಿದೆ ಎನ್ನುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಸಣ್ಣದಾದ ಸುಳಿವು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಒಂದು ದೇಶ, ಒಂದು ಚುನಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಣಾಳಿಕೆಯಲ್ಲಿ ಏನಿದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಒಂದು ದೇಶ ಒಂದು ಚುನಾವಣೆ ನಡೆಯಬೇಕು ಎನ್ನುವುದು ಎಲ್ಲರ ಅಭಿಪ್ರಾಯ. ಬಹಳಷ್ಟು ಜನರ ಇದರ ಪರವಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಣಾಳಿಕೆಯಲ್ಲಿ ಒಂದು ದೇಶ ಒಂದು ಚುನಾವಣೆ ಉಲ್ಲೇಖವಿರುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಯಾವ ಬಿಜೆಪಿ ಕಾರ್ಯಕರ್ತನೂ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲಾರ: ಆರಗ ಜ್ಞಾನೇಂದ್ರ
ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು, ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆಯನ್ನಾಗಿ ಮಾಡುವುದು, ಮೂಲ ಸೌಕರ್ಯಗಳ ಅಭಿವೃದ್ದಿಗೆ ಇನ್ನಷ್ಟು ಒತ್ತು ಸೇರಿ ಹಲವು ಗ್ಯಾರಂಟಿಯನ್ನು ಪ್ರಧಾನಿ ಮೋದಿ ಕೊಡಬಹುದು ಎನ್ನಲಾಗುತ್ತಿದೆ.