ರಾಮನಗರ: ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಜನರ ಮುಂದೆ ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದಲ್ಲ. ಗೋವಾದಲ್ಲೋ, ಮಾರಿಷಷ್‍ನಲ್ಲೋ ಕುಳಿತು ಟ್ವೀಟ್ ಮಾಡೋದಲ್ಲ. ಹುಟ್ಟುಹಬ್ಬವನ್ನ ಜನರ ಮಧ್ಯೆಯೇ ಆಚರಿಸಿಕೊಳ್ಳಿ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿಗೆ ಬಿಜೆಪಿಯ ರಾಮನಗರ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಟಾಂಗ್ ನೀಡಿದ್ದಾರೆ.
ರಾಮನಗರ ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಅಲ್ಲದೇ ಮುಖ್ಯಮಂತ್ರಿಯೂ ಕೂಡಾ ಆಗಿ ಅಧಿಕಾರವನ್ನ ಸ್ವೀಕರಿಸಿ ಆಡಳಿತ ನಡೆಸಿದ್ದೀರಿ. ಆದರೆ ಇದೀಗ ನೀವು ಗೋವಾದಲ್ಲೋ, ಮಾರಿಷಷ್‍ನಲ್ಲೋ ಕುಳಿತು ಜಿಲ್ಲೆಯ ಅಭಿವೃದ್ಧಿಯ ಯೋಜನೆಗಳ ಬಗ್ಗೆ ಟ್ವೀಟ್ ಮಾಡೋದಲ್ಲ. ನೀವು ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಾದರೆ ಅದನ್ನ ಜನರ ಮಧ್ಯೆಯೇ ಆಚರಿಸಿಕೊಳ್ಳಿ. ಆ ಮೂಲಕ ಕಷ್ಟ-ಸುಖವನ್ನ ಜನನಾಯಕನಾಗಿ ಜನರ ಮಧ್ಯೆಯೇ ಕಳೆಯಿರಿ. ಅದನ್ನ ಬಿಟ್ಟು ಗೋವಾದಲ್ಲಿ ಕುಳಿತು ಟ್ವೀಟ್ ಮಾಡುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡಿ ಘರ್ಷಣೆಗೆ ಅವಕಾಶ ಮಾಡಿಕೊಡಬೇಡಿ ಎಂದು ರುದ್ರೇಶ್ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ರಾಮನಗರ ಅಲ್ಲದೇ ವಿವಿಧ ಜಿಲ್ಲೆಗಳಿಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀಡಿದ್ದ ಯೋಜನೆಗಳ ಅನುದಾನವನ್ನ ತಡೆ ಹಿಡಿದು ಜನರಿಗೆ ಅನ್ಯಾಯ ಮಾಡಬೇಡಿ ಎಂಬ ಟ್ವೀಟ್ ವಿಚಾರವಾಗಿ ರುದ್ರೇಶ್ ಪತ್ರಿಕಾಗೋಷ್ಠಿ ನಡೆಸಿದರು. ಜಿಲ್ಲೆಯಲ್ಲಿ ಕನಕಪುರಕ್ಕೆ ನೀಡಿದ್ದ ಮೆಡಿಕಲ್ ಕಾಲೇಜನ್ನ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ದು ಬಿಟ್ಟರೆ ಯಾವುದೇ ಯೋಜನೆಗಳನ್ನು ಸ್ಥಳಾಂತರಿಸಿಲ್ಲ. ಅಲ್ಲದೇ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನೂ ಸಹ ಬಿಜೆಪಿ ಸರ್ಕಾರ ತಡೆಹಿಡಿದಿಲ್ಲ ಎಂದು ತಿಳಿಸಿದರು.
Advertisement
ಜಿಲ್ಲೆಯಿಂದ ತಾವು ಗೆದ್ದಿದ್ದೀರಿ, ನೀವು ಈ ಜಿಲ್ಲೆಯ ಋಣವನ್ನ ತೀರಿಸಬೇಕು. ಜಿಲ್ಲೆಯ ಜನರ ಜೊತೆ ಕಷ್ಟ-ಸುಖ ಎರಡಲ್ಲೂ ಭಾಗಿಯಾಗಬೇಕು. ಆದರೆ ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಈ ಜಿಲ್ಲೆಯ ಜನರ ಮುಂದೆ ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದಲ್ಲ. ಕ್ಷೇತ್ರದಲ್ಲಿ ಶಾಸಕರಾಗಿ, ಸಿಎಂ ಆಗಿ ಅಧಿಕಾರ ನಡೆಸಿದ್ದೀರಿ ಅದರ ಋಣವನ್ನ ತೀರಿಸುವಂತಹ ಕೆಲಸವನ್ನ ನೀವು ಮಾಡಿ. ಅದನ್ನ ಬಿಟ್ಟು ನಿಮ್ಮ ಸಂತೋಷದ ಕ್ಷಣಗಳನ್ನು ಬೇರೆಡೆ ಕಳೆಯುವುದು, ದುಃಖದ ಕ್ಷಣಗಳನ್ನು ಕ್ಷೇತ್ರದ ಜನರ ಜೊತೆ ಕಳೆಯುವುದಲ್ಲ ಎಂದು ಹರಿಹಾಯ್ದರು.
Advertisement
ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅನುದಾನ, ಯೋಜನೆಗಳು ಬಿಡುಗಡೆಯಾಗಿವೆ ಎಂಬುದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮರೆಯಬಾರದು. ಕಾಂಗ್ರೆಸ್ಸಿನೊಂದಿಗೆ ಮಾಡಿಕೊಂಡ ಮೈತ್ರಿ ವೇಳೆ ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದರೂ ಪ್ರಮುಖ ಯೋಜನೆಗಳು ಜಾರಿಯಾಗಲೇ ಇಲ್ಲ, ಹೀಗಿದ್ದರು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುವುದು ತಪ್ಪು ಎಂದು ಕಿಡಿಕಾರಿದರು.
ಕಣ್ವ ಜಲಾಶಯದ ಬಳಿ ಮಕ್ಕಳ ಪ್ರಪಂಚ ಸ್ಥಾಪನೆಗೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ 3 ಕೋಟಿ ರೂ. ಬಿಡುಗಡೆ ಮಾಡಿದೆ. ತಮಗಿರುವ ಮಾಹಿತಿ ಪ್ರಕಾರ ಮಂಜೂರಾಗಿರುವ 3 ಕೋಟಿ ರೂ. ಹಣ ಸಾಲುವುದಿಲ್ಲ ಎಂದು ಹೇಳಿದರು. ಅಲ್ಲದೇ ಸದ್ಯಕ್ಕೆ ಮಂಜೂರಾಗಿರುವ 3 ಕೋಟಿ ರೂ. ಹಣವನ್ನು ರಾಮನಗರದ ರಂಗರಾಯರದೊಡ್ಡಿ ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲು ಸಹ ಸರ್ಕಾರ ಉದ್ದೇಶಿಸಿದೆ. ಇಲ್ಲಿ ಬಸವಣ್ಣ ಮತ್ತು ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿ ರಂಗರಾಯರ ದೊಡ್ಡಿ ಕೆರೆಯ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ಸಹ ಉದ್ದೇಶಿಸಲಾಗಿದೆ. ಹೀಗಾಗಿ ಮಂಜೂರಾದ ಹಣವನ್ನು ರದ್ದು ಮಾಡುವುದಿಲ್ಲ ಎಂದರು.
ಮೇಕೆದಾಟು ಯೋಜನೆಗೆ ಡಿಪಿಆರ್ ನ್ನು(ಸಮಗ್ರ ಯೋಜನಾ ವರದಿ) ಸಮ್ಮಿಶ್ರ ಸರ್ಕಾರ ಸಲ್ಲಿಸದೇ ಕೇಂದ್ರದ ವಿರುದ್ಧ ದೂಷಿಸುತ್ತಿತ್ತು. ಫಿಲಂ ಸಿಟಿಗೆ ಜಾಗವನ್ನು ಗುರುತಿಸದೇ ಯೋಜನೆ ನೀಡಿ ನಂತರ ಅವರೇ ಬೇರೆಡೆ ಸ್ಥಳಾಂತರಿಸಿದರು. ಶ್ರೀ ಬಾಲಗಂಗಾಧರ ಸ್ವಾಮೀಜಿಗಳ ಹುಟ್ಟೂರು ಬಾನಂದೂರು, ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ್ ಸ್ವಾಮೀಜಿಗಳ ಹುಟ್ಟೂರು ವೀರಾಪುರವನ್ನ ಅಭಿವೃದ್ಧಿ ಮಾಡುವ ದೃಷ್ಟಿಯಲ್ಲಿ ಕುಮಾರಸ್ವಾಮಿಯವರದ್ದು ಕೇವಲ ಬಾಯಿ ಮಾತಾಗಿತ್ತು. ಆದರೆ ಬಿಜೆಪಿ ಸರ್ಕಾರ ಈಗಾಗಲೇ ಶಿವಕುಮಾರಸ್ವಾಮೀಜಿಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದೆ. ಅದರ ಜೊತೆಗೆ ವೀರಾಪುರವನ್ನ ಪ್ರವಾಸಿತಾಣವನ್ನಾಗಿ ಮಾಡುವ ಬಗ್ಗೆ ಕ್ರಮ ಕೈಗೊಂಡಿದೆ. ಜೊತೆಗೆ ಬಾನಂದೂರು ಗ್ರಾಮವನ್ನು ಸಹ ಪ್ರವಾಸಿ ತಾಣವನ್ನಾಗಿ ಮಾಡಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ರುದ್ರೇಶ್ ಅವರು ತಿಳಿಸಿದರು.