ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ದಂಡಯಾತ್ರೆ ಹೊರಟಿರೋ ಪ್ರಧಾನಿ ನರೇಂದ್ರ ಮೋದಿ, ಈಗ ಎಡಪಕ್ಷಗಳ ಬೆನ್ನುಮೂಳೆ ಕೂಡ ಮುರಿದಿದ್ದಾರೆ. ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟರ ಪಾರುಪತ್ಯ ಅಂತ್ಯಗೊಂಡಿದ್ದು, ಎಡಪಕ್ಷಗಳ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ.
65 ವರ್ಷಗಳ ರಾಜಕೀಯ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಸಿಪಿಎಂ ಜೊತೆಗಿನ ನೇರ ಹಣಾಹಣಿಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 50 ಅಭ್ಯರ್ಥಿಗಳ ಪೈಕಿ, 49 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರೂ, ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ದೇಶದ ಅತ್ಯಂತ ಬಡ ಸಿಎಂ ಎಂದೇ ಪ್ರಖ್ಯಾತರಾಗಿರೋ ಮಾಣಿಕ್ ಸರ್ಕಾರ್ ಆಡಳಿತ ವಿರೋಧಿ ಅಸ್ತ್ರವನ್ನು ಬಳಸಿಕೊಂಡು ಮೋದಿ ಗೆದ್ದಿದ್ದಾರೆ. ಹೀಗಾಗಿ, ತ್ರಿಪುರದಲ್ಲಿ ಮಾಣಿಕ್ ಸರ್ಕಾರ್ ಹೋಗಿ ಮೋದಿ ಸರ್ಕಾರ್ ಬಂದಿದೆ.
Advertisement
ಕೊನೆ ಕ್ಷಣದಲ್ಲಿ ಬಿಜೆಪಿ ತನ್ನ ರಣತಂತ್ರ ಬದಲಿಸಿದರೂ, ತತ್ವ-ಸಿದ್ಧಾಂತ ಹಾಗೂ ಮಡಿವಂತಿಕೆಯಿಂದಾಗಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಸೋತು ಸುಣ್ಣವಾಗಿದ್ದಾರೆ. 60 ಕ್ಷೇತ್ರಗಳ ಪೈಕಿ ಓರ್ವ ಅಭ್ಯರ್ಥಿ ಅಕಾಲಿಕ ನಿಧನವಾಗಿದ್ದ ಕಾರಣ 59 ಕ್ಷೇತ್ರಗಳಿಗೆ ಫೆಬ್ರವರಿ 18ಕ್ಕೆ ಎಲೆಕ್ಷನ್ ನಡೆದಿತ್ತು. ತ್ರಿಪುರ ಬಿಜೆಪಿ ಅಧ್ಯಕ್ಷ ಬಿಪ್ಲಬ್ ದೇಬ್ ಸಿಎಂ ಆಗೋ ಸಾಧ್ಯತೆ ಇದೆ. ಇದನ್ನೂ ಓದಿ: 2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?
Advertisement
Advertisement
ನಾಗಾಲ್ಯಾಂಡ್ ನಲ್ಲೂ ಕಮಲ
ನಾಗಾಲ್ಯಾಂಡ್‍ನ 60 ಸ್ಥಾನ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯ ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಪಾರ್ಟಿ(ಎನ್‍ಡಿಪಿಪಿ) 30 ಸ್ಥಾನ ಗಳಿಸಿದೆ. ಎನ್‍ಪಿಎಫ್ (ನಾಗಾಲ್ಯಾಂಡ್ ಪೀಪಲ್ ಫ್ರಂಟ್) 22 ಸ್ಥಾನಗಳನ್ನು ಗಳಿಸಿದ್ದರೆ, ಇತರರಿಗೆ 6 ಸ್ಥಾನಗಳು ಲಭಿಸಿವೆ. 59 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎನ್‍ಡಿಪಿಪಿಯಿಂದ ಮಾಜಿ ಮುಖ್ಯಮಂತ್ರಿ ನೆಪಿಯು ರಿಯೊ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನು, ಬಿಜೆಪಿ ಮೈತ್ರಿ ಕಡಿದು ಕೊಂಡಿದ್ದರೂ ಸರ್ಕಾರದ ಜೊತೆ ಕೈ ಜೋಡಿಸುವುದಾಗಿ ಎನ್‍ಸಿಎಫ್ ಮುಂದಾಗಿದೆ. ನಾಗಾಲ್ಯಾಂಡ್‍ಗೆ ಫೆಬ್ರವರಿ 27ರಂದು ಎಲೆಕ್ಷನ್ ನಡೆದಿತ್ತು.
Advertisement
ಕಾಂಗ್ರೆಸ್ಸಿಗೆ ಆಘಾತ:
ಮೇಘಾಲಯದಲ್ಲಿ ಕಾಂಗ್ರೆಸ್‍ಗೆ ಆಘಾತವಾಗಿದೆ. ಆಡಳಿತರೂಢ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ಸರ್ಕಾರ ರಚನೆ ಕಷ್ಟ ಕಷ್ಟ. ಸಿಎಂ ಮುಕುಲ್ ಸಂಗ್ಮಾ ಅವರು ಅಂಪತಿ ಮತ್ತು ಸೊಂಗ್‍ಸಾಕ್ ಎರಡೂ ಕ್ಷೇತ್ರಗಳಲ್ಲಿ ಜಯಿಸಿದ್ದು, ಪತ್ನಿ ಡಿಕ್ಕಂಚಿ ಡಿ ಶಿರಾ ಅವರು ಮಹೇಂದ್ರಗಂಜ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿರೋದೇ ಸಮಾಧಾನ. ಇನ್ನು, ಸರ್ಕಾರ ರಚನೆಗೆ ಎನ್‍ಪಿಪಿ ಹಾಗೂ ಇತರೆ 17 ಕ್ಷೇತ್ರ ಗೆದ್ದಿರುವ ಪಕ್ಷೇತರರಿಗೆ ಬಿಜೆಪಿಯವರು ಬೆಂಬಲ ನೀಡೋದು ಖಚಿತ. ಫೆಬ್ರವರಿ 27ಕ್ಕೆ ಎಲೆಕ್ಷನ್ ನಡೆದಿತ್ತು.
ಬಿಜೆಪಿ ಆಡಳಿತ ಇರೋ 19 ರಾಜ್ಯಗಳು
ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‍ಗಡ, ಆಂಧ್ರ ಪ್ರದೇಶ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ.
ಕಾಂಗ್ರೆಸ್ ಆಡಳಿತ ಇರೋ 4 ರಾಜ್ಯಗಳು:
ಕರ್ನಾಟಕ, ಪಂಜಾಬ್, ಮಿಝೋರಾಂ, ಪಾಂಡಿಚೆರಿ
ಇತರೆ ಪಕ್ಷಗಳ ಆಡಳಿತ: ದೆಹಲಿ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು, ಕೇರಳ