ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿಯವರನ್ನು ಪಕ್ಷದಿಂದ ದೂರವಿಟ್ಟಿದ್ದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಲ್ಲಾ ಅವಕಾಶಗಳಿದ್ದವು, ಆದರೆ ಗಾಲಿ ಜನಾರ್ದನ ರೆಡ್ಡಿಯನ್ನ ಬಿಜೆಪಿ ನಾಯಕರು ಪಕ್ಷದಿಂದ ದೂರವಿಟ್ಟಿದ್ದರಿಂದ ಸೋಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಬಳಿಕ ಮಾಧ್ಯಮದವರು ಈ ಕುರಿತು ಪ್ರಶ್ನಿಸಿದಾಗ, ರಾಜ್ಯದ ಜನರು ಜನಾರ್ದನ ರೆಡ್ಡಿಯವರನ್ನು ದೂರವಿಟ್ಟಿದ್ದಕ್ಕೆ ಬಿಜೆಪಿ ಸೋಲು ಅನುಭವಿಸಿತೂ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಜನರ ಅಭಿಪ್ರಾಯವಾಗಿದೆ. ಜನರ ಅಭಿಪ್ರಾಯ ಹೀಗಿರುವಾಗ ಅದನ್ನು ಒಪ್ಪಬೇಕಲ್ವಾ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಟೀಕಿಸಿದರು. ಜನರು ಹೇಳಿದ್ದನ್ನು ನಾನು ಹೇಳಿದ್ದೇನೆ. ಇದರಲ್ಲಿ ನನ್ನದೇನು ಇಲ್ಲ ಅನ್ನೋ ಮೂಲಕ ಸೋಮಶೇಖರ ರೆಡ್ಡಿ ತನ್ನ ಹೇಳಿಕೆಗೆ ಸಮರ್ಥನೆ ನೀಡಿದರು.