– ರಾಹುಲ್ ವಿರುದ್ಧದ ಟೀಕೆಗಳ ಪಟ್ಟಿ ನೀಡಿದ್ದ `ಕೈ’ಗೆ ಬಿಜೆಪಿ ತಿರುಗೇಟು
ನವದೆಹಲಿ: ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ (BJP) ನಾಯಕರ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಪತ್ರ ಬರೆದಿದ್ದರು. ಇದಾದ ಎರಡು ದಿನಗಳ ನಂತರ ಸಚಿವರೂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಪ್ರಧಾನಿ ವಿರುದ್ಧ ಕಾಂಗ್ರೆಸ್ ನಾಯಕರು ಬಳಸಿರುವ ಅವಹೇಳನಕಾರಿ ಪದಗಳನ್ನು ಪಟ್ಟಿ ಮಾಡಿ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ.
Advertisement
ರಾಹುಲ್ ವಿರುದ್ಧ ತೀವ್ರವಾಗಿ ಟೀಕಿಸಿರುವ ನಡ್ಡಾ, ಜನರು ಹಲವಾರು ಬಾರಿ ತಿರಸ್ಕರಿಸಿದ `ವಿಫಲ ಉತ್ಪನ್ನ’ಕ್ಕೆ ಕಾಂಗ್ರೆಸ್ ಮತ್ತೆ ಹೊಳಪು ನೀಡಲು ಪ್ರಯತ್ನಿಸಿದೆ ಎಂದು ಕುಟುಕಿದ್ದಾರೆ.
Advertisement
ಪ್ರಧಾನಿಗೆ `ಮೌತ್ ಕಾ ಸೌದಾಗರ್’ (ಸಾವಿನ ವ್ಯಾಪಾರಿ) ಎಂಬ ಅವಹೇಳನಕಾರಿ ಪದವನ್ನು ಬಳಸಿದ್ದು ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅಲ್ಲವೇ? ನೀವು ಮತ್ತು ನಿಮ್ಮ ಪಕ್ಷವು ಇಂತಹ ನಾಚಿಕೆಯಿಲ್ಲದ ಹೇಳಿಕೆಗಳನ್ನು ವೈಭವೀಕರಿಸಿದ್ದೀರಿ. ಆಗ ಕಾಂಗ್ರೆಸ್ ರಾಜಕೀಯ ಸೌಹಾರ್ದತೆಯನ್ನು ಮರೆತುಬಿಟ್ಟಿತ್ತೆ? ಎಂದು ಪ್ರಶ್ನಿಸಿದ್ದಾರೆ.
Advertisement
ಕಾಂಗ್ರೆಸ್ ನಾಯಕರು, ಪ್ರಧಾನಿಯನ್ನು ಹಾವು, ಚೇಳು, ರಾಕ್ಷಸ, ಪಿಕ್ ಪಾಕಟೆರ್ ಮತ್ತು ಹೇಡಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ ಅವರ ಪೋಷಕರನ್ನು ಸಹ ಅವಮಾನಿಸಲಾಗಿದೆ ಎಂದು ಅವರು ಬರೆದಿದ್ದಾರೆ.
Advertisement
ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿ ಮೀಸಲಾತಿಯನ್ನು ಕೊನೆಗೊಳಿಸುವ ಮತ್ತು ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಭಾರತದ ಪ್ರಜಾಪ್ರಭುತ್ವವನ್ನು ಅತಿ ಹೆಚ್ಚು ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ತುರ್ತು ಪರಿಸ್ಥಿತಿಯನ್ನು ಹೇರಿತ್ತು. ಅಲ್ಲದೇ ತ್ರಿವಳಿ ತಲಾಖನ್ನು ಬೆಂಬಲಿಸಿತು. ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸಿ ಅವುಗಳ ದುರ್ಬಲಗೊಳಿಸಿತು ಎಂದು ಅವರು ಆರೋಪಿಸಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿಗೆ ಮಲ್ಲಿಕಾರ್ಜುನ ಖರ್ಗೆಯವರು ಬರೆದ ಪತ್ರದಲ್ಲಿ, ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ, ಹಿಂಸಾತ್ಮಕ ಮತ್ತು ಅಸಭ್ಯ ಟೀಕೆಗಳ ಸರಣಿಯನ್ನು ಪಟ್ಟಿ ಮಾಡಿದ್ದರು.
ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು `ನಂಬರ್ 1 ಭಯೋತ್ಪಾದಕ’ ಹೇಳಿಕೆ, ರಾಹುಲ್ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂ. ಘೋಷಿಸಿದ ಶಿವಸೇನೆ ನಾಯಕ ಮತ್ತು ದೆಹಲಿ ಬಿಜೆಪಿ ನಾಯಕ ತರ್ವಿಂದರ್ ಸಿಂಗ್ ಮರ್ವಾ ಅವರ ಬೆದರಿಕೆ, ರಾಹುಲ್ ಅವರ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅದೇ ಅದೃಷ್ಟವನ್ನು ಎದುರಿಸುತ್ತಾರೆ ಎಂಬ ಬೆದರಿಕೆ ವಿಚಾರಗಳನ್ನು ಪ್ರಸ್ತಾಪಿಸಿದ್ದರು.
ಭಾರತೀಯ ಸಂಸ್ಕೃತಿಯು ಪ್ರಪಂಚದಾದ್ಯಂತ ಅಹಿಂಸೆ ಮತ್ತು ಪ್ರೀತಿಗೆ ಹೆಸರುವಾಸಿಯಾಗಿದೆ. ಬ್ರಿಟಿಷರ ಕಾಲದಲ್ಲಿ ಗಾಂಧೀಜಿ ಈ ಮಾನದಂಡಗಳನ್ನು ನಮ್ಮ ರಾಜಕೀಯದ ಪ್ರಮುಖ ಭಾಗವಾಗಿಸಿದರು. ಸ್ವಾತಂತ್ರ್ಯದ ನಂತರ, ಆಡಳಿತ ಪಕ್ಷ ಮತ್ತು ಆಡಳಿತದ ನಡುವೆ ಗೌರವಾನ್ವಿತ ಭಿನ್ನಾಭಿಪ್ರಾಯದ ದೀರ್ಘ ಸಂಪ್ರದಾಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಬಿಜೆಪಿ ನಾಯಕರಲ್ಲಿ ಸೌಜನ್ಯ ಮತ್ತು ಸಜ್ಜನಿಕೆಯನ್ನು ತರಬೇಕು. ಭಾರತೀಯ ಪ್ರಜಾಪ್ರಭುತ್ವವನ್ನು ಅವನತಿಯಿಂದ ರಕ್ಷಿಸಲು ಇಂತಹ ಹೇಳಿಕೆಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಖರ್ಗೆ ಮನವಿ ಮಾಡಿದ್ದರು.