ಬೆಂಗಳೂರು: 2 ಕ್ಷೇತ್ರ ಬಿಟ್ಟು ಅನರ್ಹಗೊಂಡ 13 ಕ್ಷೇತ್ರಗಳ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಮೂಲಕ ಸಿಎಂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಇಂದು ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ 13 ಕ್ಷೇತ್ರಗಳ ಟಿಕೆಟ್ ಹಂಚಿಕೆಯಾಗಿದೆ. ಶಿವಾಜಿ ನಗರ ಮತ್ತು ಶಂಕರ್ ಪ್ರತಿನಿಧಿಸುತ್ತಿರುವ ರಾಣಿಬೆನ್ನೂರು ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗಿಲ್ಲ. ಶಂಕರ್ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಬಿಜೆಪಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ.
ರಮೇಶ್ ಜಾರಕಿಹೊಳಿ(ಗೋಕಾಕ್) ಎಂಟಿಬಿ ನಾಗರಾಜ್(ಹೊಸಕೋಟೆ), ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ) ಶ್ರೀಮಂತ ಪಾಟೀಲ್(ಕಾಗವಾಡ) ಶಿವರಾಂ ಹೆಬ್ಬಾರ್(ಯಲ್ಲಾಪುರ) ಬಿಸಿ ಪಾಟೀಲ್(ಹಿರೇಕೆರೂರು) ಆನಂದ್ ಸಿಂಗ್ (ವಿಜಯನಗರ), ಡಾ.ಸುಧಾಕರ್(ಚಿಕ್ಕಬಳ್ಳಾಪುರ) ಬೈರತಿ ಬಸವರಾಜ್(ಕೆಆರ್ ಪುರ) ಎಸ್‍ಟಿ ಸೋಮಶೇಖರ್(ಯಶವಂತಪುರ), ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣ ಗೌಡ(ಕೆ.ಆರ್.ಪೇಟೆ) ಅವರಿಗೆ ಟಿಕೆಟ್ ನೀಡಲಾಗಿದೆ.
ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಯಡಿಯೂರಪ್ಪ, ಇದೊಂದು ಐಹಿಹಾಸಿಕ ದಿನ. ಬಹುಶಃ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಈ 17 ಮಂದಿ ಜೆಡಿಎಸ್, ಕಾಂಗ್ರೆಸ್ ಶಾಸಕರು ಕಾರಣ. ಅವರು ತಮ್ಮ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಮಗಾಗಿ ಎಲ್ಲಾ ರೀತಿಯ ತ್ಯಾಗವನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ನಂತರ ಅವರೆಲ್ಲರೂ ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಸದಸ್ಯತ್ವವನ್ನು ಪಡೆದು ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.
ರಾಜೀನಾಮೆ ಕೊಟ್ಟು ನಮ್ಮ ಜೊತೆ ಬಂದಂತಹ ವೇದಿಕೆ ಮೇಲಿರುವ ಶಾಸಕರಿಗೆ, ಬೆಂಬಲಿಗರಿಗೆ ಸಿಎಂ ಆಗಿ ನಳಿನ್ ಕುಮಾರ್ ಅವರ ಪರವಾಗಿ ಭರವಸೆ ಕೊಡುತ್ತಿದ್ದೇನೆ. ನಾವೇನು ನಿಮಗೆ ಭರವಸೆ ಮಾತನ್ನು ಕೊಟ್ಟಿದ್ದೀವೋ ಅದನ್ನು ನಾವು ಅಕ್ಷರಶಃ ಪಾಲಿಸುತ್ತೇವೆ. ನಿಮಗೆ ನಂಬಿಕೆದ್ರೋಹ ಅಥವಾ ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಹೇಳಿದರು.
ಬಹುಶಃ ದೇಶದ ರಾಜಕಾರಣದಲ್ಲಿ ಈ ರೀತಿ 17 ಮಂದಿ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ಇವರು ನಮಗಾಗಿ ಎಲ್ಲಾ ರೀತಿಯ ತ್ಯಾಗ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಕೈ ಜೊಡಿಸಿ ಪ್ರಾರ್ಥಿಸುತ್ತೇನೆ, ಇವರ ಗೆಲುವು ನಮ್ಮ ಜವಾಬ್ದಾರಿ. ಉಪಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.