ಮೈಸೂರು: ಆಪರೇಷನ್ ಕಮಲದಲ್ಲಿ ಮುಖ್ಯ ಪಾತ್ರವಹಿಸಿದ್ದ ಯೋಗೇಶ್ವರ್ ಅವರನ್ನು ಹುಣಸೂರಿನಿಂದ ಕಣಕ್ಕೆ ಇಳಿಸಲು ಬಿಜೆಪಿ ಲೆಕ್ಕಾಚಾರ ಹಾಕಿಕೊಂಡಿದೆ.
ಹುಣಸೂರು ಕ್ಷೇತ್ರವನ್ನ ಗೆದ್ದೆ ಗೆಲ್ಲಬೇಕು ಎಂದು ಬಿಜೆಪಿ ತಂತ್ರ ರೂಪಿಸಿದ್ದು, ಈ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಕೋಟೆ ಛಿದ್ರಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಅನರ್ಹ ಶಾಸಕ ಎಚ್.ವಿಶ್ವನಾಥ್ ರಾಜೀನಾಮೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆ ಟಿಕೆಟ್ ಕೊಟ್ಟು ಹುಣಸೂರು ಕ್ಷೇತ್ರವನ್ನು ವಶ ಪಡಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಹುಣಸೂರು ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ನಡುವೆ ಪೈಪೋಟಿ ಇದ್ದ ಕ್ಷೇತ್ರವಾಗಿದೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಜೊತೆಗಿನ ಪೈಪೋಟಿಯ ಲಾಭವನ್ನು ಪಡೆಯಲು ಬಿಜೆಪಿ ತೀರ್ಮಾನಿಸಿದ್ದು, ಜಾತಿ ಹಾಗೂ ಹಿಂದುತ್ವದ ಅಜೆಂಡಾದ ಮೂಲಕ ಕ್ಷೇತ್ರವನ್ನು ಪಡೆಯಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ಬಿಜೆಪಿ ಲೆಕ್ಕಾಚಾರ:
ಈ ಕ್ಷೇತ್ರದಲ್ಲಿ ವಿಶ್ವನಾಥ್ ಪ್ರಾಬಲ್ಯವಿದೆ. ಒಂದು ವೇಳೆ ಈ ಕ್ಷೇತ್ರದಲ್ಲಿ ವಿಶ್ವನಾಥ್ ಪುತ್ರನನ್ನು ಕಣಕ್ಕಿಳಿಸಿದರೆ ಅದು ಪಕ್ಷಕ್ಕೆ ನಷ್ಟವಾಗುತ್ತದೆ. ಮೊದಲೇ ಅದು ಕಾಂಗ್ರೆಸ್ ಜೆಡಿಎಸ್‍ನ ಭದ್ರಕೋಟೆಯಾಗಿದೆ. ಹೀಗಾಗಿ ಈ ಕ್ಷೇತ್ರಕ್ಕೆ ಯೋಗೇಶ್ವರ್ ಕಣಕ್ಕಿಳಿಸಿದರೆ ಒಕ್ಕಲಿಗರ ಮತ ಮತ್ತು ಶಾಸಕ ಪ್ರತಾಪ್ ಸಿಂಹರ ಮೂಲಕ ಹಿಂದುತ್ವ ಮತವನ್ನು ಪಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಇನ್ನೊಂದೆಡೆ ಆಪರೇಷನ್ ಕಮಲದ ಸಂದರ್ಭದಲ್ಲಿ ಹೆಚ್ಚು ಸಹಾಯ ಮಾಡಿದ್ದಾರೆ. ಈ ಮೂಲಕ ಅವರಿಗೆ ಬೆಲೆ ಕೊಟ್ಟಂತಾಗುತ್ತದೆ ಎಂಬುದು ಬಿಜೆಪಿ ಪ್ಲ್ಯಾನ್ ಆಗಿದೆ. ಕಳೆದು ವಿಧಾನಸಭಾ ಚುನಾವಣೆಯಲ್ಲೂ ಇವರ ಹೆಸರು ಕೇಳಿ ಬಂದಿತ್ತು.