ಬಿಜೆಪಿಗೆ ಮತ್ತೊಮ್ಮೆ ಜೆಡಿಎಸ್ ಬೆಂಬಲದ ಅಗತ್ಯವಿಲ್ಲ: ಬಿಎಸ್‍ವೈ

Public TV
2 Min Read
BSY B 1

– ಬೆಂಗಳೂರಿಗೆ ನಾಲ್ವರು ರೆಬಲ್ ಶಾಸಕರು ವಾಪಸ್!

ಬೆಂಗಳೂರು: ಬಿಜೆಪಿ ಮತ್ತೊಮ್ಮೆ ಜೆಡಿಎಸ್ ಬೆಂಬಲದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್‍ನಲ್ಲಿ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ವೇಳೆ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜೆಡಿಎಸ್‍ನ ವಿಷಯಧಾರಿತ ಬೆಂಬಲದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಬಿಎಸ್ ಯಡಿಯೂರಪ್ಪ ಅವರು, ಒಂದು ವೇಳೆ ಜೆಡಿಎಸ್ ಬೆಂಬಲ ಕೊಡುವುದಾಗಿ ಅಧಿಕೃತವಾಗಿ ಹೇಳಿದರೆ ನಿರ್ಧಾರವನ್ನು ಹೈಕಮಾಂಡ್‍ಗೆ ಬಿಡೋಣ ಎಂದು ಶಾಸಕರಿಗೆ ತಿಳಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

BJP A

ಅತೃಪ್ತರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಆಶಾದಾಯಕವಾಗಿ ಬರಬಹುದು. ಆಗ ಅವರನ್ನು ಗೆಲ್ಲಿಸಿಕೊಂಡು ಉಳಿದ ಅವಧಿಗೆ ಬಿಜೆಪಿ ಸರ್ಕಾರವನ್ನು ಗಟ್ಟಿ ಮಾಡೋಣ ಎಂದು ಬಿಎಸ್‍ವೈ ತಿಳಿಸಿದ್ದಾರಂತೆ. ಜೊತೆಗೆ ಸೋಮವಾರ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಶಾಸಕರು ಯಾವ ರೀತಿ ನಡೆದುಕೊಳ್ಳಬೇಕು. ಯಾರ್ಯಾರು ಮಾತನಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಜ್ವರದ ಕಾರಣ ಸಭೆ ಮಧ್ಯೆ ಮಾಜಿ ಸಚಿವ ಸೋಮಣ್ಣ ನಿರ್ಗಮಿಸಿದರು. ಬಿಜೆಪಿ ಶಾಸಕರೆಲ್ಲಾ ಇಂದು ರಾತ್ರಿ ಚಾನ್ಸರಿ ಪೆವಿಲಿಯನ್‍ನಲ್ಲೇ ಉಳಿಯಲಿದ್ದು, ನಾಳೆ ಬೆಳಗ್ಗೆ ಇಲ್ಲಿಂದಲೇ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ. ಆದರೆ ಬಿಜೆಪಿ ಶಾಸಕಾಂಗ ಸಭೆಗೆ ಬೆಳಗಾವಿ, ಗದಗ ಜಿಲ್ಲೆಯ ಶಾಸಕರಾದ ಉಮೇಶ್ ಕತ್ತಿ, ಅಭಯ್ ಪಾಟೀಲ್, ಸಿ.ಸಿ.ಪಾಟೀಲ್ ಮತ್ತು ಕಳಕಪ್ಪ ಬಂಡಿ ಗೈರಾಗಿದ್ದರು. ವಿಮಾನ ವಿಳಂಬವಾದ ಕಾರಣದಿಂದಾಗಿ ತಡವಾಗಿ ಪಕ್ಷದ ಶಾಸಕರನ್ನು ಸೇರಲಿದ್ದಾರೆ. ಮುಂಬೈನಲ್ಲಿ ಅತೃಪ್ತರ ಜೊತೆ ಇರುವ ಕಾರಣ ಆರ್ ಅಶೋಕ್ ಮತ್ತು ಅಶ್ವತ್ಥ ನಾರಾಯಣ ಸಭೆಗೆ ಹಾಜರಾಗಿರಲಿಲ್ಲ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

BJPA

ಸಭೆ ಮುಕ್ತಾಯದ ನಂತರ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು, ಸೋಮವಾರ ನಾವು ನೂರಕ್ಕೆ ನೂರು ಬಹುಮತ ಸಾಬೀತು ಮಾಡುತ್ತೇವೆ. ಹೀಗಾಗಿ ಬೆಳಗ್ಗೆ 10ಗಂಟೆಗೆ ಸಿಎಂ ಕಚೇರಿಯಲ್ಲಿ ಎಲ್ಲಾ 105 ಜನ ಬಿಜೆಪಿ ಶಾಸಕರು ಸೇರುತ್ತಾರೆ. ನಂತರ ಅಲ್ಲಿಂದ ಬೆಳಗ್ಗೆ 11 ಗಂಟೆಗೆ ಸದನಕ್ಕೆ ಹೋಗಲಾಗುವುದು. ಎಲ್ಲಾ ಶಾಸಕರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಹತ್ತು ಜನ ನಾಯಕರಿಗೆ ನೀಡಲಾಗಿದೆ ಎಂದು ತಿಳಿಸಿದರು.

REBEL MLA 1

ಬೆಂಗಳೂರಿಗೆ ವಾಪಸ್: ಬಿಎಸ್ ಯಡಿಯೂರಪ್ಪನವರು ಮುಂಬೈನಲ್ಲಿ ಉಳಿಯುವಂತೆ ಅತೃಪ್ತ ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಈಗ ನಾಲ್ವರು ಬೆಂಗಳೂರಿಗೆ ಬರುತ್ತಿದ್ದಾರೆ. ಮುಂಬೈನಿಂದ ಭೈರತಿ ಬಸವರಾಜು, ಮುನಿರತ್ನ, ಎಸ್‍ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ವಾಪಸ್ ಆಗುತ್ತಿದ್ದಾರೆ. ಇವರನ್ನು ಹೊರತುಪಡಿಸಿ, ಉಳಿದ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದೆಹಲಿಗೆ ಹೊರಟಿರುವ ರೆಬೆಲ್ ಶಾಸಕರು ಹಿರಿಯ ವಕೀಲರನ್ನು ಭೇಟಿಯಾಗಿ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರದ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡುವ ಬಗ್ಗೆ ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *