2014ರ ನಂತರ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ

Public TV
2 Min Read
NDA BJP Modi meeting

ನವದೆಹಲಿ: ರಾಜ್ಯಸಭೆಗೆ (Rajya Sabha) 12 ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಮೇಲ್ಮನೆಯಲ್ಲಿ 2014ರ ನಂತರ ಸ್ಪಷ್ಟವಾದ ಬಹುಮತವನ್ನು ಪಡೆದಿದೆ.

ಉಪಚುನಾವಣೆಯಲ್ಲಿ (By Election) ಬಿಜೆಪಿ 9 ಸ್ಥಾನ ಗೆದ್ದರೆ ಮಿತ್ರ ಪಕ್ಷಗಳಾದ ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಮತ್ತು ರಾಷ್ಟ್ರೀಯ ಲೋಕ ಮಂಚ್‌ನ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಇನ್ನೊಂದು ಸ್ಥಾನವನ್ನು ಕಾಂಗ್ರೆಸ್‌ ಪಕ್ಷ ತೆಲಂಗಾಣದಿಂದ ಗೆದ್ದುಕೊಂಡಿದೆ.

ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಜಾರ್ಜ್‌ ಕುರಿಯನ್‌ (ಮಧ್ಯಪ್ರದೇಶದಿಂದ) ಮತ್ತು ರವನೀತ್‌ ಸಿಂಗ್‌ ಬಿಟ್ಟೂ (ರಾಜಸ್ಥಾನದಿಂದ) ಕೇಂದ್ರ ಸಚಿವರಾಗಿದ್ದು ಜೂನ್‌ನಲ್ಲಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಾಗ ಇಬ್ಬರೂ ಸಂಸದರಾಗಿರಲಿಲ್ಲ. ಮಂತ್ರಿಯಾದ 6 ತಿಂಗಳ ಒಳಗಡೆ ಸಂಸದರಾಗಬೇಕಾಗಿರುವ ಕಾರಣ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ.

ರಾಜ್ಯಸಭೆಯ 10 ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಆರ್‌ಎಸ್‌ನ ಕೇಶವ ರಾವ್‌ ಹಾಗೂ ಬಿಜೆಡಿಯ ಮಮತಾ ಮೊಹಾಂತ ಅವರು ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರುವ ಮುನ್ನ ರಾಜೀನಾಮೆ ನೀಡಿದ್ದರಿಂದ 12 ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.

rajya sabha

 

2014ರ ನಂತರ ಮೊದಲ ಬಾರಿಗೆ ಎನ್‌ಡಿಎ ಒಕ್ಕೂಟ ರಾಜ್ಯಸಭೆಯಲ್ಲಿ ಬಹುಮತ ಪಡೆದಿದೆ. ಮೋದಿ ಸರ್ಕಾರದ ಎರಡೂ ಅವಧಿಯಲ್ಲಿ ಎನ್‌ಡಿಎ ಮತ್ತು ಯುಪಿಎ ಹೊರತಾದ ಪಕ್ಷಗಳ ಸದಸ್ಯರ ಬಲದಿಂದ ರಾಜ್ಯಸಭೆಯಲ್ಲಿ ಮಸೂದೆಗಳನ್ನು ಪಾಸ್‌ ಮಾಡುತಿತ್ತು. ಇದನ್ನೂ ಓದಿ: ಅಂದು ಶೂಟಿಂಗ್‌ಗೆ ಹೋಗಿದ್ದ ಜೈಲಿಗೆ ದರ್ಶನ್‌ ಶಿಫ್ಟ್‌

ವೈಎಸ್‌ಆರ್‌ಪಿ(11), ಬಿಜೆಡಿ(8), ಎಐಎಡಿಎಂಕೆ(4) ಸದಸ್ಯರು ಹಲವು ಬಾರಿ ಸರ್ಕಾರದ ಪರ ನಿಂತಿದ್ದರು. ಈ ಬಾರಿ ವೈಎಸ್‌ಆರ್‌ಪಿ ಮತ್ತು ಬಿಜೆಡಿ ವಿರೋಧ ಪಕ್ಷದ ಸ್ಥಾನದಲ್ಲಿದೆ.

Rajya Sabha

ಬಹುಮತ ಹೇಗೆ?
ರಾಜ್ಯಸಭೆಯ ಒಟ್ಟು 245 ಸ್ಥಾನಗಳ ಪೈಕಿ 8 ಸ್ಥಾನಗಳು (ಜಮ್ಮು ಮತ್ತು ಕಾಶ್ಮೀರದಿಂದ 4, ನಾಮನಿರ್ದೇಶಿತ 4) ಖಾಲಿಯಿವೆ. ಹೀಗಾಗಿ ಸದನದ ಬಲ 237 ಆಗಿರುವುದರಿಂದ ಬಹುಮತಕ್ಕೆ 119 ಸ್ಥಾನಗಳ ಅಗತ್ಯವಿದೆ.

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಗೆ ಬಹುಮತ ಸಿಕ್ಕಿದ್ದರೂ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಾಗಿತ್ತು. ನಾಮ ನಿರ್ದೇಶನಗೊಂಡ 6 ಸದಸ್ಯರು ಮತ್ತು ಹರಿಯಾಣದ ಓರ್ವ ಪಕ್ಷೇತರ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಸದಸ್ಯರ ಸಂಖ್ಯೆ 110 ಇತ್ತು. ಈ ಚುನಾವಣೆಯ ನಂತರ ಎನ್‌ಡಿಎ ಸದಸ್ಯರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.

ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ 96ಕ್ಕೆ ಏರಿಕೆಯಾಗಿದ್ದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ 27 ಸದಸ್ಯರನ್ನು ಹೊಂದಿದೆ. 13 ಸದಸ್ಯರನ್ನು ಹೊಂದುವ ಮೂಲಕ ಟಿಎಂಸಿಯು ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಮೂರನೇ ಪಕ್ಷ ಆಗಿದೆ.

ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 245 ಆಗಿದ್ದು ಬಹುಮತಕ್ಕೆ 123 ಸ್ಥಾನದ ಅಗತ್ಯ ಬೇಕಿದೆ. ನಾಮ ನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳನ್ನು ಸರ್ಕಾರ ಭರ್ತಿಗೊಳಿಸಿದರೆ ಎನ್‌ಡಿಎ ಸದಸ್ಯರ ಸಂಖ್ಯೆ 125ಕ್ಕೆ ಏರಿಕೆಯಾಗಲಿದೆ.

 

Share This Article