ಉಡುಪಿ: ಮೀನುಗಾರಿಕಾ, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಗೆ ಬಿಜೆಪಿ ಚಿತ್ರಹಿಂಸೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನನಿತ್ಯ ಸಚಿವರಿಗೆ ಕೇಂದ್ರ ಮತ್ತು ರಾಜ್ಯ ನಾಯಕರಿಂದ ಹಿಂಸೆಯಾಗುತ್ತಿದೆಯಂತೆ. ಪಾಪ ಮಧ್ವರಾಜ್ ಗೆ ಬಿಜೆಪಿಯವರ ಹಿಂಸೆ ತಡ್ಕೊಳಕಾಗ್ತಿಲ್ಲ ಅಂತ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಉಡುಪಿ ಕಾರ್ಯಕ್ರಮದ ಸಂದರ್ಭ ಜನಾಶೀರ್ವಾದ ಯಾತ್ರೆಯ ಬಸ್ ಹತ್ತುವಾಗ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ. ಪ್ರಮೋದ್ ಮಧ್ವರಾಜ್ ಹುಟ್ಟು ಕಾಂಗ್ರೆಸ್ಸಿಗ. ಅವರು ಯಾವುದೇ ಕಾರಣಕ್ಕೂ ಬಿಜೆಪಿ ಹೋಗಲ್ಲ. ಎಷ್ಟೇ ಪರೀಕ್ಷೆಗಳು ನಡೆದರೂ ಮಧ್ವರಾಜ್ ನಮ್ಮ ಜೊತೆಯಲ್ಲೇ ಇರ್ತಾರೆ ಅಂತ ಎರಡೆರಡು ಬಾರಿ ಒತ್ತಿ ಹೇಳಿದರು.
ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿಯಿದೆ. ಸ್ವತಃ ಸಚಿವರೇ ತಾನು ಬಿಜೆಪಿ ಸೇರಲ್ಲ ಅಂತ ಹಲವು ಬಾರಿ ಹೇಳಿಕೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಕೂಡಾ ಮೂರ್ನಾಲ್ಕು ಬಾರಿ ಸ್ಪಷ್ಟನೆ ನೀಡಿದ್ದರು. ಈ ನಡುವೆ ಕೇಂದ್ರ, ರಾಜ್ಯ ಬಿಜೆಪಿ ನಾಯಕರು ಪ್ರಮೋದ್ ಮಧ್ವರಾಜ್ ಅವರನ್ನು ಪಕ್ಷಕ್ಕೆ ಸೆಳೆಯುವ ಯತ್ನವನ್ನು ಮೂರು ವರ್ಷದಿಂದ ಮಾಡುತ್ತಿದೆ. ಆದ್ರೆ ಬಿಜೆಪಿ ನಾಯಕರು ಸಚಿವರಿಗೆ ಯಾವ ತರದ ಚಿತ್ರಹಿಂಸೆ ಕೊಡ್ತಾಯಿದ್ದಾರೆ. ಯಾವೆಲ್ಲಾ ಮಾರ್ಗದಲ್ಲಿ ಕಾಟ ಕೊಡುತ್ತಿದ್ದಾರೆ? ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ಆಗಲಿ, ಸಚಿವ ಪ್ರಮೋದ್ ಮಧ್ವರಾಜ್ ಆಗಲಿ ಸ್ಪಷ್ಟನೆ ನೀಡಿಲ್ಲ.