ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ ಬೆನ್ನಲ್ಲೇ ಈಗ ಬಿಜೆಪಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ದೂರು ನೀಡಿದೆ.
ಉದ್ಧವ್ ಠಾಕ್ರೆ, ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕಿ ರಶ್ಮಿ ಠಾಕ್ರೆ, ಯುವಾ ಸೇನಾ ಅಧ್ಯಕ್ಷ ವರುಣ್ ಸರ್ದೇಸಾಯಿ ಅವರ ವಿರುದ್ಧ ಬಿಜೆಪಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ – ಕೇಂದ್ರ ಸಚಿವ ನಾರಾಯಣ ರಾಣೆ ಅರೆಸ್ಟ್
ಮೂರು ದೂರುಗಳು ನಾಸಿಕ್‌ನಲ್ಲಿ ದಾಖಲಾಗಿದ್ದು, ಪೊಲೀಸರು ದೂರು ದಾಖಲಾಗಿದ್ದನ್ನು ಖಚಿತಪಡಿಸಿದ್ದಾರೆ.
2018ರಲ್ಲಿ ಶಿವಾಜಿ ಫೋಟೋಗೆ ಚಪ್ಪಲಿ ಹಾಕಿಕೊಂಡು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಲಾರ್ಪಣೆ ಮಾಡಿದ್ದರು. ಈ ವಿಚಾರವನ್ನು ಉಲ್ಲೇಖಿಸಿ ಉದ್ಧವ್ ಠಾಕ್ರೆ ಶಿವಾಜಿಗೆ ಅವಮಾನಗೈದ ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿದ್ದರು. 2018 ರಲ್ಲಿ ಉದ್ಧವ್ ಠಾಕ್ರೆ ಈ ಹೇಳಿಕೆ ನೀಡಿದ್ದು, ಈ ವೇಳೆ ಠಾಕ್ರೆ ಮುಖ್ಯಮಂತ್ರಿ ಆಗಿರಲಿಲ್ಲ.
ದೂರಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ, ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾತ್ರ ಅಲ್ಲ ಅವರು ಗೋರಖ್‌ಪುರ ಪೀಠದ ಮುಖ್ಯಸ್ಥರಾಗಿದ್ದಾರೆ. ಈ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಅಷ್ಟೇ ಅಲ್ಲದೇ ಅವರು ಮುಖ್ಯಮಂತ್ರಿ ಆಗಿದ್ದು, ಸಾಂವಿಧಾನಿಕ ಹುದ್ದೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ
ಬುಧವಾರ ನಾರಾಯಣ ರಾಣೆ ಅವರ ವಿರುದ್ಧ ಸಾಮ್ನಾದಲ್ಲಿ ಸಂಪಾದಕೀಯ ಬರೆಯಲಾಗಿತ್ತು. ಈ ಸಂಪಾದಕೀಯದಲ್ಲಿ ರಾಣೆ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಾಮ್ನಾ ಸಂಪಾದಕಿ ಆಗಿರುವ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ವಿರುದ್ಧ ದೂರು ದಾಖಲಾಗಿದೆ.
ಯುವಾ ಸೇನಾ ಅಧ್ಯಕ್ಷ ವರುಣ್ ಸರ್ದೇಸಾಯಿ ರಾಣೆ ನಿವಾಸದ ಮುಂದೆ ಅತಿಕ್ರಮವಾಗಿ ಪ್ರತಿಭಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಠಾಕ್ರೆ ತಮ್ಮ ಅಧಿಕೃತ ನಿವಾಸಲ್ಲಿ ಸರ್ದೇಸಾಯಿ ಅವರನ್ನು ಗೌರವಿಸಿದ್ದಾರೆ. ಮಾಧ್ಯಮಗಳಲ್ಲಿ ಈ ವಿಡಿಯೋ ಪ್ರಸಾರವಾಗಿ ತಪ್ಪು ಸಂದೇಶ ಹೋಗಿದೆ ಎಂದು ಆರೋಪಿಸಿಲಾಗಿದೆ.