ತುಮಕೂರು: ನಾನು ವಿಜಯೇಂದ್ರ ಎನ್ನುವುದಕ್ಕಿಂತ ಯುವಕರಿಗೆ ಅವಕಾಶ ಕೊಡಬೇಕು ಎಂದು ನನಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಬಿಜೆಪಿಯ ನೂತನ ಸಾರಥಿ ಬಿ.ವೈ ವಿಜಯೇಂದ್ರ (B.Y Vijayendra) ಹೇಳಿದ್ದಾರೆ.
ತುಮಕೂರಿನ (Tumakuru) ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಬಿಜೆಪಿ (BJP) ಕಚೇರಿಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು ಎನ್ನುವ ಕುರಿತಾಗಿ ಭಾರೀ ಚರ್ಚೆಗಳು ನಡೆದಿವೆ. ಅಂತಿಮವಾಗಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಮ್ಮ ಪಕ್ಷ ರಾಷ್ಟ್ರೀಯ ನಾಯಕರಿಗೆ ಕೊಡುವ ಗೌರವವನ್ನು ಬೂತ್ ಕಾರ್ಯಕರ್ತನಿಗೂ ಕೊಡುತ್ತದೆ. ಇದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪಂಚ ರಾಜ್ಯಗಳ ಮತದಾರರು ಕಾಂಗ್ರೆಸ್ ಗ್ಯಾರಂಟಿ ಭಜನೆಗೆ ಮರುಳಾಗಬಾರದು: ಹೆಚ್‍ಡಿಕೆ
Advertisement
Advertisement
ಇಡೀ ಜಗತ್ತೇ ನರೇಂದ್ರ ಮೋದಿ ಅವರನ್ನು ಮೆಚ್ಚಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಎಲ್ಲಾ ಹಿರಿಯರ ವಿಶ್ವಾಸದೊಂದಿಗೆ ಪಕ್ಷ ಮುನ್ನಡೆಸಬೇಕು. ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಪಕ್ಷ ಸಂಘಟನೆ ಮಾಡಿ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡ ಬೇಕಿದೆ. ಅತ್ಯಲ್ಪ ಕಾಲದಲ್ಲೇ ಜನಪ್ರಿಯತೆ ಕಳೆದುಕೊಂಡ ಸರ್ಕಾರ ಇದಾಗಿದೆ ಎಂದಿದ್ದಾರೆ.
Advertisement
ಅಧಿಕಾರ ಸ್ವೀಕಾರಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಹಿರಿಯ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿದ್ದೇನೆ. ಯಡಿಯೂರಪ್ಪನವರೂ ಕೂಡಾ ಎಲ್ಲಾ ನಿರ್ಣಯಕ್ಕೂ ಮುನ್ನ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯುತಿದ್ದರು. ನಾನು ಕೂಡಾ ರಾಜ್ಯಾಧ್ಯಕ್ಷನಾಗಿ ಅಧಿಕಾರ ಹಿಡಿಯುವ ಮುನ್ನ ಆಶೀರ್ವಾದ ಪಡೆದಿದ್ದೇನೆ. ನ.15 ರಂದು ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಮಾರನೇ ದಿನ ನ.16ರಂದು ಬೆಂಗಳೂರಿನ ಅರಮನೆ ಮೈದಾನಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಸಭೆ ನಡೆಯಲಿದೆ. ಪಕ್ಷದ ಎಲ್ಲಾ ಹಿರಿಯ ಮುಖಂಡರ ಯತ್ನಾಳ್ ಹಾಗೂ ಸೋಮಣ್ಣ ಸೇರಿದಂತೆ ಎಲ್ಲರೂ ಇರಲಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
Advertisement
ಐದು ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ರಾಷ್ಟ್ರೀಯ ನಾಯಕರು ಬರುತ್ತಿಲ್ಲ. ನಮ್ಮ ಮೊದಲ ಆದ್ಯತೆ ಬರಗಾಲದ ಕುರಿತು ಆಗಿದೆ. ಪಕ್ಷದಲ್ಲಿ ಅಸಮಾಧಾನ ಇದೆ ಎನ್ನುವುದು ಸಹಜವಾದದ್ದು. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಮುನ್ನಡೆಸುತ್ತೇವೆ. ಯಾರೂ ಕೂಡ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿಲ್ಲ. ಸೂಕ್ತ ಸ್ಥಾನ ಮಾನ ಕೊಟ್ಟಿದ್ದರು. ಕಳೆದ ಬಾರಿ ಪಕ್ಷಕ್ಕೆ ಹಿನ್ನಡೆ ಆಗಿರಬಹುದು. ಈ ಬಾರಿ ಲೋಕ ಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಲೆಪ್ಚಾದಲ್ಲಿ ಸೈನಿಕರೊಂದಿಗೆ ಪ್ರಧಾನಿ ದೀಪಾವಳಿ ಆಚರಣೆ