ಮೈಸೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ 350ಕ್ಕೂ ಹೆಚ್ಚು ಮಂದಿ ಅಮಾಯಕ ಜೀವಗಳು ಬಲಿಯಾಗಿದೆ. ಈ ಆತಂಕದ ವಾತಾವರಣದಲ್ಲಿ ಸಿಲುಕಿದ್ದ ಮೈಸೂರಿನ ಬಿಜೆಪಿ ಮುಖಂಡ ವೈ.ವಿ. ರವಿಶಂಕರ್ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಸುರಕ್ಷಿತವಾಗಿ ಊರಿಗೆ ವಾಪಸ್ ಆಗಿದ್ದಾರೆ.
ರವಿಶಂಕರ್ ಸೇರಿ 14 ಜನ ಸ್ನೇಹಿತರ ತಂಡ ಚುನಾವಣಾ ಪ್ರಚಾರ ಮುಗಿಸಿ ಪ್ರವಾಸಕ್ಕೆಂದು ಕೊಲಂಬೋಗೆ ತೆರಳಿದ್ದರು. ಈ ವೇಳೆ ಕೊಲಂಬೋದ ರೆಸಾರ್ಟ್ ನಲ್ಲಿ ರವಿಶಂಕರ್, ಅವರ ಸ್ನೇಹಿತರು ಮತ್ತು ಕುಟುಂಬದವರ ಜೊತೆ ತಂಗಿದ್ದರು. ಬಾಂಬ್ ಸ್ಫೋಟವಾದ ಸಮಯದಲ್ಲಿ ದಾಳಿ ನಡೆದ ಸ್ಥಳದ ಸಮೀಪವೇ ಇವರೆಲ್ಲ ಇದ್ದರು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಾಗದೇ ರವಿಶಂಕರ್, ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಬುಧವಾರ ರಾತ್ರಿ ಮೈಸೂರಿಗೆ ಮರಳಿದ್ದಾರೆ.
ಇಷ್ಟು ದಿನ ಕೊಲಂಬೋದಿಂದ 30 ಕಿ.ಮೀ ದೂರದ ರೆಸಾರ್ಟ್ ನಲ್ಲಿ ಇವರೆಲ್ಲ ತಂಗಿದ್ದರು. ಅದೇ ರೆಸಾರ್ಟ್ ನಲ್ಲಿಯೇ ಒಟ್ಟು 50 ಮಂದಿ ಭಾರತೀಯರು ತಂಗಿದ್ದರು. ಜೆಡಿಎಸ್ ಮುಖಂಡರು ತಂಗಿದ್ದ ಶಾಂಗ್ರಿಲಾ ಹೋಟೆಲ್ ಅನ್ನು ಮೊದಲು ಬುಕ್ ಮಾಡಿದ್ದರು. ಬಳಿಕ ಕಾರಣಾಂತರಗಳಿಂದ ಸ್ಥಳವನ್ನು ಬದಲಿಸಿದ್ದರಿಂದ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ.