BelgaumDistrictsKarnatakaLatestLeading NewsMain Post

ಕಳಪೆ ಕಾಮಗಾರಿ ಪ್ರಶ್ನಿಸಿದ ಯುವಕರನ್ನ ಅರೆಸ್ಟ್ ಮಾಡುವಂತೆ ಸೂಚಿಸಿದ BJP ಶಾಸಕ

ಚಿಕ್ಕೋಡಿ: ಕಳಪೆ ಕಾಮಗಾರಿ ಆಗಿದೆ ಅಂತ ದೂರಿದ ಸಾಮಾಜಿಕ ಯುವಕರನ್ನ ಅರೆಸ್ಟ್ ಮಾಡುವಂತೆ ಕುಡಚಿ ಮೀಸಲು ಕ್ಷೇತ್ರದ ಬಿಜೆಪಿ (BJP) ಶಾಸಕ ಪೊಲೀಸರಿಗೆ (Police) ಸೂಚನೆ ನೀಡಿದ್ದು, ಯುವಕರನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ವಿನಯ ಬಿದರಮಳ್ಳಿ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು ಇದರಲ್ಲಿ ಶಾಸಕರ ಪಾಲು ಎಷ್ಟು? ಎಂದು ಫಲಕ ಹಿಡಿದುಕೊಂಡಿದ್ದ ಯುವಕರನ್ನ ನೋಡಿದ ಶಾಸಕ ಪಿ.ರಾಜೀವ್ ದಾಖಲೆ ನೀಡುವಂತೆ ಗರಂ ಆಗಿದ್ದಾರೆ. ಅಲ್ಲದೇ ಏನು-ಎತ್ತ ವಿಚಾರಿಸದೇ ತಕ್ಷಣ ಯುವಕರನ್ನ ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

ನಿನ್ನ ಪ್ರಶ್ನೆ ಏನಿದ್ದರೂ ಅಧಿಕಾರಿಯನ್ನ ಕೇಳಿಕೋ ಎಂದು ಶಾಸಕರು ಆವಾಜ್ ಹಾಕಿದ್ದಾರೆ. ನಮ್ಮ ಶಾಸಕರು ನೀವೇ, ನಿಮ್ಮನ್ನೇ ಕೇಳಬೇಕಲ್ವಾ ಎಂದು ಹೇಳಿ ಯುವಕರು ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ಶಾಸಕರು (MLA) ತಕ್ಷಣವೇ ಯುವಕರನ್ನು ಅರೆಸ್ಟ್ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಪೊಲೀಸರು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

ಇದೇ ವೇಳೆ ಶಾಸಕರ ನಡೆ ಖಂಡಿಸಿ ಯುವಕರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಠಾಣೆಗೆ ಕರೆದೊಯ್ದು ಡೈರಿ ಎಂಟ್ರಿ ಮಾಡಿ ಯುವಕರನ್ನ ಬಿಟ್ಟು ಕಳಿಸಿದ್ದಾರೆ.

ಹಾರೂಗೇರಿ ಪೊಲೀಸ್ ಠಾಣಾ (Harugeri Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Live Tv

Leave a Reply

Your email address will not be published. Required fields are marked *

Back to top button