– ಬಿಎಸ್‍ವೈ ಬೆಂಬಲಕ್ಕೆ ನಾನಿದ್ದೇನೆ
ಬೆಂಗಳೂರು: ಹೊಟ್ಟೆಕಿಚ್ಚಿಗೆ ಕೆಲವರು ಮುಖ್ಯಮಂತ್ರಿ ಬಿ.ಎಸ್.ಯಡುಯೂರಪ್ಪ ಅವರನ್ನು ದ್ವೇಷಿಸುತ್ತಾರೆ. ಆದರೆ ಅವರ ಬೆಂಬಲಕ್ಕೆ ನಾನಿದ್ದೇನೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ನಗರದ ಶಿಕ್ಷಕರ ಸದನದಲ್ಲಿ ವಿರಾಟ್ ಹಿಂದೂಸ್ತಾನ್ ಸಂಗಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿರದ ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಹಳ್ಳಿ ಹಳ್ಳಿಗೆ ಸಂಚರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಕೆಲವರು ಹೊಟ್ಟೆ ಕಿಚ್ಚಿಗೆ ಅವರನ್ನು ದ್ವೇಷಿಸುತ್ತಾರೆ ಎಂದು ಸಿಎಂ ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದರು.
ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬೆಂಗಳೂರು ನನಗೆ ತುಂಬಾ ಇಷ್ಟವಾದ ನಗರ. ನನ್ನ ಅಪ್ಪ-ಅಮ್ಮ, ಅಕ್ಕ ಬೆಂಗಳೂರಿಗರೇ. ನಾನು ಚೆನ್ನೈಗೆ ಹೋದಾಗ ಅಲ್ಲಿನ ಜನರು ನಮಗೆ ಕಾವೇರಿ ನೀರು ಬಿಡುತ್ತಿಲ್ಲ ಎಂದು ಕೇಳುತ್ತಾರೆ. ನನ್ನ ಉತ್ತರ ಕೇಳಿ, ನೀವು ಕರ್ನಾಟಕದವರೋ, ತಮಿಳುನಾಡಿನವರೋ ಅಂತ ಪ್ರಶ್ನಿಸುತ್ತಾರೆ. ಆದರೆ ಕರ್ನಾಟಕದ ಜನತೆ, ನೀರು ಬೇಕಾದರೆ ಕೊಡುತ್ತೇವೆ. ಆದರೆ ಕಾವೇರಿಯನ್ನು ಕೊಡಲ್ಲ ಎನ್ನುತ್ತಾರೆ ಎಂದು ಹೇಳಿದರು.
ಇದೇ ವೇಳೆ ಗಾಂಧಿ ಕುಟುಂಬ ವಿರುದ್ಧ ವ್ಯಂಗವಾಡಿದ ಅವರು, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಓದಿ, ಫೇಲ್ ಆಗಿದ್ದರು. ಅದೇ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾಸಾಗಿದ್ದರು. ಆದರೂ ನೆಹರು ಅವರಿಗೆ ಪಂಡಿತ್ ನೆಹರು ಎನ್ನುತ್ತಾರೆ. ನೆಹರು ಕುಟುಂಬದ ಒಬ್ಬರೂ ಪಾಸ್ ಆಗಿಲ್ಲ. ಹಾಗೆ ನೋಡಿದರೆ ಪಂಡಿತ್ ಅಂಬೇಡ್ಕರ್ ಅಂತ ಕರೆಯಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತೆಳ್ಳನೆಯ ಇಟಲಿಯ ಮಹಿಳೆಗೆ ಹೆದರುತ್ತಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಕುಟುಕಿದರು. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿ, ಸಿಎಎಗೆ ಕಾಂಗ್ರೆಸ್‍ನವರು ವಿರೋಧಿಸುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶದಿಂದ ಬರುವ ನುಸುಳುಕೋರರಿಗೆ ಪೌರತ್ವ ನೀಡಲು ಹೇಗೆ ಸಾಧ್ಯ. ನಮ್ಮ ದೇಶದಲ್ಲಿ ಇರುವ ಮುಸ್ಲಿಮರಿಗೆ ನಾವು ಪ್ರಶ್ನಿಸುವುದಿಲ್ಲ ಎಂದರು.