ಬೆಂಗಳೂರು: ಕೈ, ತೆನೆ ನಾಯಕರು ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ರಮೇಶ್ ಕುಮಾರ್ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟು ಈಗ ಹಾಯಾಗಿದ್ದಾರೆ. ಆದರೆ ನಾವು ತಲೆಕೆಡಿಸಿಕೊಂಡಿದ್ದೇವೆ. ನಮಗೆ ರಾಜ್ಯದಲ್ಲಿ ಏನಾಗುತ್ತಿದೆ ತಳ ಬುಡ ಅರ್ಥವಾಗುತ್ತಿಲ್ಲ. ಎಷ್ಟು ಜನ ರಾಜೀನಾಮೆಗೆ ಕೊಡುತ್ತಾರೆ, ಏನು ಕಥೆ? ಒಂದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕೈ- ತೆನೆ ನಾಯಕರು ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ರಮೇಶ್ ಕುಮಾರ್ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತಾರೆ. ಅವರ ಮೇಲೆ ಅಪಾರ ಗೌರವ ಇದೆ. ಮಾದರಿ ಸ್ಪೀಕರ್ ಆಗಿ ಈ ವಿಚಾರದಲ್ಲಿ ನಡೆದುಕೊಳ್ಳುತ್ತಾರೆ ನಂಬಿಕೆ ಇದೆ. ಅತೃಪ್ತರು ದೆಹಲಿಗೆ ಹೋಗಿದ್ದಾರಾ? ಮುಂಬೈಗೆ ಹೋಗಿದ್ದಾರ ಅಥವಾ ಸಿಂಗಾಪುರಕ್ಕೆ ಹೋಗಿದ್ದಾರ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಹಿಂದೆ ನಾವು ಮೂಗು ತೂರಿಸಿ ಸಮಸ್ಯೆ ಆಗಿದೆ. ಹಾಗಾಗಿ ನಾವು ಈ ಬಾರಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ. ಅವರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಮುನಿರತ್ನ ಅವರನ್ನು ಕಳೆದ ದಿನ ಕಾರಿನಲ್ಲಿ ನಮ್ಮ ಪ್ರದೇಶದ ಸಮಸ್ಯೆ ಹೇಳುವುದಕ್ಕೆ ಕರೆದುಕೊಂಡು ಹೋಗಿದ್ದು, ಜಾಲಹಳ್ಳಿಯಲ್ಲಿ ಮನೆ ಇದೆ. ಅಲ್ಲಿ ಮರ, ರಸ್ತೆ ಸಮಸ್ಯೆ ಇತ್ತು. ಅದಕ್ಕೆ ನಾನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದೆ. ನಮ್ಮ ಏರಿಯಾ ಅವರ ವ್ಯಾಪ್ತಿಯಲ್ಲಿ ಬರುತ್ತದೆ. ಅದಕ್ಕೆ ಕರೆದುಕೊಂಡು ಹೋದೆ ಅಷ್ಟೇ ಬೇರೆನೂ ಇಲ್ಲ ಎಂದು ಅಶೋಕ್ ತಿಳಿಸಿದರು.
ಸರ್ಕಾರ ಇವತ್ತು ಹೋಗುತ್ತಾ, ನಾಳೆ ಹೋಗುತ್ತಾ, 12 ರಂದು ಪತನವಾಗುತ್ತಾ ಗೊತ್ತಿಲ್ಲ. ಮೈತ್ರಿ ಸರ್ಕಾರ ಗಾಳಿಪಟ ಇದ್ದಂತೆ. ಆಗಸದಲ್ಲಿ ಹಾರಾಡುತ್ತಿದೆ. ಹೀಗಾಗಿ ಗಾಳಿಪಾಟದ ದರ ಲೈಟ್ ಕಂಬಕ್ಕೆ ತಗ್ಲಾಕಿಕೊಳ್ಳೊತ್ತಾ? ರಸ್ತೆಯಲ್ಲಿ ಬೀಳುತ್ತಾ? ಅಥವಾ ಹೊಳೆನರಸೀಪುರದ ಹೊಳೆಯಲ್ಲಿ ಬೀಳುತ್ತಾ ಗೊತ್ತಿಲ್ಲ ಎಂದು ಹೇಳಿ ವ್ಯಂಗ್ಯವಾಡಿದರು.