ಕಲಬುರಗಿ: ನನ್ನ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಮೃತ ಬಿಜೆಪಿ ಮುಖಂಡ ಗರೀಶ್ ಚಕ್ರ ಸಹೋದರ ಸದಾಶಿವ ಚಕ್ರ ಕಿಡಿಕಾರಿದ್ದಾರೆ.
ಕೊಲೆ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನನ್ನ ತಮ್ಮ ರಾಜಕೀಯದಲ್ಲಿ ಬೆಳೆಯುವುದನ್ನು ನೋಡಲು ಆಗದೇ ಕೊಲೆ ಮಾಡಲಾಗಿದೆ. ಇದರಲ್ಲಿ ನಮ್ಮ ಜಾತಿಯ ಕೆಲ ನಾಯಕರು ಸಹ ಭಾಗಿ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ರಾತ್ರಿ 10 ಗಂಟೆಗೆ ಸಚಿನ್ ಹಾಗೂ ಸ್ನೇಹಿತರು ಸನ್ಮಾನ ಮಾಡುವುದಾಗಿ ಕರೆದುಕೊಂಡು ಹೋಗಿದ್ದರು. ಕೊಲೆಗೂ ಮುನ್ನಾ ಸನ್ಮಾನ ಮಾಡಿ ನಂತರ ಅತನನ್ನು ಕೊಲೆ ಮಾಡಲಾಗಿದೆ. ನನ್ನ ತಮ್ಮನ ಕೊಲೆಗೆ ಸುಪಾರಿ ನೀಡಿದವರ ಹೆಸರು ಪೊಲೀಸರ ಮುಂದೆ ಹೇಳುತ್ತೇನೆ ಎಂದರು. ಇದನ್ನೂ ಓದಿ: ಕಣ್ಣಿಗೆ ಖಾರದ ಪುಡಿ ಎರಚಿ ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ
ಪ್ರಕರಣ: ಕಳೆದ ನಾಲ್ಕು ದಿನಗಳ ಹಿಂದೆ ಕಲಬುರಗಿ ಬಿ.ಎಸ್ ಎನ್ ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಸಂಸದ ಜಾಧವ್ ಆಯ್ಕೆ ಮಾಡಿದ್ದರು. ಸಲಹಾ ಸಮಿತಿ ನಿರ್ದೇಶಕ ನೇಮಕ ಹಿನ್ನೆಲೆ ಪಾರ್ಟಿ ಕೊಡುವುದಾಗಿ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿಗೆ ಕರೆಸಿ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಹತ್ಯೆಗೈಯಲಾಗಿದೆ ಎನ್ನಲಾಗಿದೆ.
ಸಾಗನೂರ ಗ್ರಾಮದ ಸಚಿನ್&ಗ್ಯಾಂಗ್ ನಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.