ಬೆಳಗಾವಿ: ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಬೈಲೂರು ಗ್ರಾಮದ ಬಳಿ ನಡೆದಿದೆ.
ಸಂತಿ ಬಸ್ತವಾಡ ಗ್ರಾಮದ ನಿವಾಸಿ ನಾಗಪ್ಪಾ ಜಿಡ್ಡನ್ನವರ(45) ಕೊಲೆಯಾಗಿರುವ ಬಿಜೆಪಿ ನಾಯಕ. ನಾಗಪ್ಪಾ ಸಂತಿ ಬಸ್ತವಾಡ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದರು. ಗುರುವಾರ ತಡರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಬೆಳಗಾವಿಯ ಬೈಲೂರು ಗ್ರಾಮದ ಬಳಿ ನಾಗಪ್ಪ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ರಸ್ತೆ ಬದಿ ಬೀಸಾಡಿದ್ದಾರೆ ಎಂದು ಶಂಕಿಸಲಾಗಿದೆ.
ನಾಗಪ್ಪ ಅವರನ್ನು ಕೊಲೆ ಮಾಡಿದ ಆರೋಪಿಗಳ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಕೊಲೆ ಮಾಡಲು ನಿಖರ ಕಾರಣಗಳು ಏನೆಂದು ಲಭ್ಯವಾಗಿಲ್ಲ. ಆದರೆ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.