ಬಳ್ಳಾರಿ: ಜಿಂದಾಲ್ ಹಾಗೂ ಐಎಂಎ ಪ್ರಕರಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಯಾಕೆ ಬಾಯಿ ಬಿಡುತ್ತಿಲ್ಲ. ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ಡ್ಯಾನ್ಸ್ ಮಾಡಿ, ತೊಡೆ ತಟ್ಟಿ ರಾಜ್ಯದ ಆಸ್ತಿ ಉಳಿಸೋರು ನಾವೇ ಎಂದರು. ಆದರೆ 3,667 ಎಕರೆ ಸರ್ಕಾರಿ ಭೂಮಿ ವಿಚಾರದಲ್ಲಿ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ. ಸತ್ಯ ಹೇಳೋಕೆ ಅವರಿಗೆ ಬಾಯಿ ಇಲ್ಲವೇ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಕಿಡಿ ಕಾರಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡದೇ ಹೋಗಬಹುದು. ಆದರೆ, ಜಿಂದಾಲ್‍ಗೆ ಭೂಮಿ ಪರಭಾರೆ ವಿಚಾರದಲ್ಲಿ ಹೋರಾಟ ಮುಂದುವರಿಸುತ್ತೇವೆ. ಹೋರಾಟ ಮಾಡದಿದ್ದರೆ ರಾಜ್ಯವನ್ನೇ ಮಾರುತ್ತಾರೆ. ನಾವು ಹೋರಾಟ ಪ್ರಾರಂಭಿಸಿದ ನಂತರವೇ ಉಪ ಸಮಿತಿ ರಚಿಸಿದ್ದಾರೆ. ಈ ಹಿಂದೆ ಜಾರ್ಜ್ ಸಹ ಜಿಂದಾಲ್‍ಗೆ ಭೂಮಿ ಪರಭಾರೆ ನೀಡುವ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಏನು ತಪ್ಪಿದೆ ಎಂದು ಹೇಳುತ್ತಿದ್ದಾರೆ. ಯಾರು ಏನೇ ಹೇಳಲಿ ಯಾವುದೇ ಕಾರಣಕ್ಕೂ ಆಸ್ತಿ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಐಎಂಎ ಹಾಗೂ ಜಿಂದಾಲ್ ಭೂಮಿ ಪರಭಾರೆ ನೀಡುವ ಕುರಿತು ಸಿಬಿಐ ತನಿಖೆಗೆ ವಹಿಸಲಿ. ಈ ಕುರಿತು ಜಿಂದಾಲ್ ಪ್ರಕರಣ ಕೈ ಬಿಟ್ಟು, ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಎಚ್.ಕೆ.ಪಾಟೀಲ್, ಎಸ್.ಆರ್, ಪಾಟೀಲ್, ಆನಂದ್‍ಸಿಂಗ್ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಂಪತ್ತು ಉಳಿಸಿಕೊಳ್ಳಲು ನಾವು ಮುಂದಾಗುತ್ತೇವೆ. ಸಿದ್ದರಾಮಯ್ಯ ಎರಡೂ ಪ್ರಕರಣಗಳ ಕುರಿತು ಬಾಯಿ ಬಿಡಬೇಕು. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ದಿಟ್ಟತನ ಪ್ರದರ್ಶಿಸಬೇಕು. ಭಾರೀ ಮಾತನಾಡುವ ಡಿ.ಕೆ.ಶಿವಕುಮಾರ್ ಈಗೇಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
Advertisement
ಪ್ರಭಾವಿ ರಾಜಕಾರಣಿಗಳು ಭಾಗಿ:
ಜಿಂದಾಲ್‍ಗೆ ಭೂಮಿ ನೀಡುವ ವಿಚಾರದಲ್ಲಿ ಸರ್ಕಾರದ ಉನ್ನತ ಮಟ್ಟದ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಕಾಂಗ್ರೆಸ್‍ನ ಕೆಲ ನಾಯಕರು ಜಿಂದಾಲ್‍ಗೆ ಭೂಮಿ ನೀಡಬಾರದು ಎಂದು ಹೇಳುತ್ತಿದ್ದಾರೆ. ಅಲ್ಲದೆ, ಐಎಂಎ ವಂಚನೆ ಪ್ರಕರಣದಲ್ಲಿ 600 ಕೋಟಿ ರೂ.ಗಳಷ್ಟು ಸಾಲವನ್ನು ಮನ್ಸೂರ್‍ಗೆ ಕೊಡಿಸಲು ಸಚಿವರು ಶಿಫಾರಸು ಮಾಡಿದ್ದಾರೆ. ಕಾಂಗ್ರೆಸ್‍ಗೆ ರಾಜ್ಯದ ಆಸ್ತಿ ಬಗ್ಗೆ ಕಾಳಜಿ ಇಲ್ಲ. ವಿವಿಧ ಕಾರ್ಯಕ್ರಮಗಳಲ್ಲಿ ವಂಚಕ ಮನ್ಸೂರ್ ಜೊತೆ ಜಮೀರ್, ರೋಷನ್ ಬೇಗ್, ಸಿಎಂ, ಸಿದ್ದರಾಮಯ್ಯ ಫೋಟೋಗಳು ಇದ್ದರೂ ಮಾತುಗಳನ್ನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಈ ಮೊದಲೇ ಜಿಂದಾಲ್‍ಗೆ ಭೂಮಿ ನೀಡುವ ಕುರಿತು ತಿಳಿದಿತ್ತು. ಆದರೂ, ಎಚ್ಚೆತ್ತುಕೊಂಡಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸದಿದ್ದಲ್ಲಿ, ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರು ಭಾಗಿಯಾಗಿದ್ದಾರೆ ಎಂದು ಜನ ಕೇಳುತ್ತಿದ್ದಾರೆ. ಜಿಂದಾಲ್‍ಗೆ ಭೂಮಿ ನೀಡುವ ವಿಚಾರದಲ್ಲಿ ಮರುಪರಿಶೀಲನೆ ನಾಟಕ ಸರಿಯಲ್ಲ. ಈ ಪ್ರಕರಣದಲ್ಲಿ ವಿವಿಧ ನಾಯಕರು ಸಾಕಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ. ಸರ್ಕಾರ ತಿರ್ಮಾನಿಸಿದರೆ ಯಾವುದೇ ಒಪ್ಪಂದ ಅನೂರ್ಜಿತವಾಗುತ್ತದೆ. ಜಿಂದಾಲ್ ವಿಚಾರದಲ್ಲಿ ಭೂಮಿ ಉಚಿತ ಕೊಡಬೇಕು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದೂ ಕೂಡ ತಪ್ಪು. ನಮ್ಮ ಶಾಸಕರೇನು ಮೇಲಿಂದ ಉದುರಿಲ್ಲ. ಯಾರು ಈ ಕುರಿತು ಅಸಂಬದ್ಧ ಹೇಳಿಕೆ ನೀಡಿದರೂ ಅದು ತಪ್ಪು ಎಂದು ಹೇಳಿದ್ದಾರೆ. ಈ ಕುರಿತು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಹೋರಾಟ ನಡೆಸಲಾಗುವುದು ಎಂದು ಈಶ್ವರಪ್ಪ ಎಚ್ಚರಿಸಿದ್ದಾರೆ.