ಲಕ್ನೋ: ಉತ್ತರ ಪ್ರದೇಶದ (Uttar Pradesh) ಬಿಜೆಪಿ (BJP) ಮುಖಂಡರೊಬ್ಬರನ್ನು ಮೂವರು ಅಪರಿಚಿತರು ವಿಷದ ಇಂಜೆಕ್ಷನ್ ಚುಚ್ಚಿ ಹತ್ಯೆಗೈದಿದ್ದಾರೆ.
ಮೃತರನ್ನು ಗುಲ್ಫಮ್ ಸಿಂಗ್ ಯಾದವ್ (Gulfam Singh Yadav) ಎಂದು ಗುರುತಿಸಲಾಗಿದೆ. ಮೂವರು ವ್ಯಕ್ತಿಗಳು ಗುಲ್ಫಮ್ ಸಿಂಗ್ ಯಾದವ್ ಅವರನ್ನು ಭೇಟಿಯಾಗಲು ಸೋಮವಾರ ಮಧ್ಯಾಹ್ನ ಬೈಕ್‌ನಲ್ಲಿ ಬಂದಿದ್ದರು. ಬಳಿಕ ಅವರೊಂದಿಗೆ ಕುಳಿತು ಮಾತನಾಡಿ, ಯೋಗ ಕ್ಷೇಮ ವಿಚಾರಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಕುಡಿಯಲು ನೀರು ಕೇಳಿದ್ದಾರೆ. ನೀರು ನೀಡಿ ಮಲಗಿದಾಗ ಸಿಂಗ್ ಅವರ ಹೊಟ್ಟೆಗೆ ವಿಷದ ಇಂಜೆಕ್ಷನ್ ಚುಚ್ಚಿ ಪಾರಾರಿಯಾಗಿದ್ದಾರೆ.
ಇದರಿಂದ ಭಯಭೀತರಾದ ಗುಲ್ಫಮ್ ಸಿಂಗ್ ಮನೆಯಿಂದ ಹೊರಬಂದು ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರ ಶಿಫಾರಸಿನ ಮೇರೆಗೆ ಯಾದವ್ ಅವರನ್ನು ಅಲಿಘರ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೃಷ್ಣ ಕುಮಾರ್ ಬಿಷ್ಣೋಯ್ ಹೇಳಿದ್ದಾರೆ.
ಘಟನಾ ಸ್ಥಳದಿಂದ ಪೊಲೀಸರು ಖಾಲಿ ಸಿರಿಂಜ್ ಮತ್ತು ಹೆಲ್ಮೆಟ್ ಸೇರಿದಂತೆ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಂತಕರ ಪತ್ತೆಗೆ ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ. ರಸ್ತೆಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಪೊಲೀಸರಿಗೆ ಕೆಲವು ಸುಳಿವುಗಳು ಸಿಕ್ಕಿವೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂಭಾಲ್‌ನ ಜುನಾವರಿ ಬ್ಲಾಕ್ ಪ್ರದೇಶದ ದವ್ತ್ರಾ ಹಿಮಾಚಲ ಗ್ರಾಮದ ನಿವಾಸಿ ಗುಲ್ಫಮ್ ಸಿಂಗ್ ಯಾದವ್, ಲೆಕ್ಕಪರಿಶೋಧಕ ಹುದ್ದೆಯನ್ನು ತೊರೆದು ರಾಜಕೀಯಕ್ಕೆ ಪ್ರವೇಶಿಸಿದ್ದರು. ತಮ್ಮ ಪ್ರಾಮಾಣಿಕ ಬಲದಿಂದ ಬಿಜೆಪಿಯಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದರು. 1976 ರಲ್ಲಿ ಬದೌನ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಉಸ್ತುವಾರಿ ಹುದ್ದೆಯನ್ನು ಅಲಂಕರಿಸಿದ್ದರು. 2004 ರಲ್ಲಿ, ಸಾರ್ವಜನಿಕರ ಒತ್ತಾಯದ ಮೇರೆಗೆ ಅವರು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ಕಣಕ್ಕಿಳಿದಿದ್ದರು. ಯಾದವ್ ಅವರ ಪತ್ನಿ ಗ್ರಾಮದ ಮುಖ್ಯಸ್ಥರಾಗಿದ್ದು, ಉತ್ತರ ಪ್ರದೇಶದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.
ಈ ಕೊಲೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಡಬಲ್ ಎಂಜಿನ್ ಬಿಜೆಪಿ ಸರ್ಕಾರದಲ್ಲಿ, ಬಿಜೆಪಿ ನಾಯಕನೊಬ್ಬರನ್ನು ಅವರ ಮನೆಯೊಳಗೆ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇದು ʻರಾವಣ ರಾಜ್ಯʼ ಎಂದು ವ್ಯಂಗ್ಯವಾಡಿದೆ.