ಕೊಪ್ಪಳ: ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕನ ವಿರುದ್ಧ ಕಮಲ ಮುಖಂಡರೊಬ್ಬರು ಗಂಭೀರ ಆರೋಪವನ್ನು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸೈಯದ್ ಅಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.
ಗಂಗಾವತಿಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಮುಖ್ಯ ಕಾರಣ ಕಾರ್ಯಕರ್ತರು. ಪರಣ್ಣ ಮುನವಳ್ಳಿಯವರು ಗೆಲ್ಲಲು ನಾನು ಮುಖ್ಯ ಕಾರಣ ಅನ್ನೋದನ್ನ ಮರೆತಿದ್ದಾರೆ. ಅವರಿಗೆ ಕಮೀಷನ್ ಯಾರು ಕೊಡ್ತಾರೋ ಅವರನ್ನ ಮಾತ್ರ ತಮ್ಮ ಜೊತೆ ಇಟ್ಟುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಶಾಸಕರಿಗೆ ಬಾರ್, ಕ್ಲಬ್, ಒಸಿ ನಡೆಸುವವರಿಂದ ಪ್ರತಿ ತಿಂಗಳು ಸುಮಾರು 4.5 ಲಕ್ಷ ರೂ ಕಮಿಷನ್ ಸಿಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಾಕ್ಷರು ಹಾಗೂ ಸದಸ್ಯರು ಯಾರು ಕೂಡ ಮಾತನಾಡುವ ಸ್ಥಿತಿಯಲ್ಲಿಲ್ಲ. 85 ಲಕ್ಷ ರೂ.ಗಳಷ್ಟು ಪಾರ್ಟಿ ಫಂಡ್ ಮತ್ತು ಲಂಚದ ಹಣ ನಗರಸಭೆ ಚುನಾವಣೆ ಸಮಯದಲ್ಲಿ ಬಂದಿದೆ. 2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 5 ಕೋಟಿ ರೂ.ಗಳಷ್ಟು ದುಡ್ಡನ್ನು ಯಡಿಯೂರಪ್ಪ ಅವರು ಶಿವರಾಮ್ ಗೌಡರಿಗೆ ನೀಡಿದ್ದರು. ಈ ವಿಚಾರವನ್ನು ಶಿವರಾಮ್ ಗೌಡರಿಗೆ ಕೇಳಬೇಕು ಅವರಿಗೆ ಸ್ಪಷ್ಟವಾಗಿ ಗೊತ್ತು, ಬಂದ ದುಡ್ಡನ್ನು ಯಾವ ಕಾರ್ಯಕರ್ತರಿಗೆ ಕೊಟ್ಟಿದ್ದಾರೆ? ಎಂದು ಬಿಜೆಪಿ ಮುಖಂಡ ಪ್ರಶ್ನಿಸಿದ್ದಾರೆ. ಪ್ರತಿ ತಿಂಗಳು ಶಾಸಕರಿಗೆ ಬಾರ್, ಕ್ಲಬ್‍ಗಳಿಂದ ಮಾಮೂಲಿ ಬರುತ್ತದೆ ಇದನ್ನು ಯಾರು ಕೇಳುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೈಯದ್ ಅಲಿ ಅವರು ನಾನು ನನಗೆ ಗೊತ್ತಿರುವ ವಿಚಾರವನ್ನು ನಿಮ್ಮ ಬಳಿ ಹೇಳಿದ್ದೇನೆ. ಚೈತ್ರಾ ಕುಂದಾಪುರ ಅವರಿಗೆ ಅನ್ಯಾಯ ಆಗಿದೆ. ಅವರ ಮೇಲೆ ಕೇಸ್ ಹಾಕಿದ್ದರೂ ಬೇಲ್ ಕೊಡಿಸುವ ವ್ಯವಸ್ಥೆಯನ್ನು ಶಾಸಕರು ಮಾಡಿಲ್ಲ. ಈ ಕುರಿತು ಕ್ರಮ ಕೈಗೊಂಡು ಅವರಿಗೆ ನ್ಯಾಯ ಕೊಡಿಸಬೇಕು. ಅಲ್ಲದೆಆರ್‌ಎಸ್‌ಎಸ್ ಮಧ್ಯಸ್ಥಿಕೆ ವಹಿಸಿಕೊಂಡು ಈ ಪ್ರಕರಣಕ್ಕೆ ಬೆಂಬಲ ನೀಡಬೇಕು. ಚೈತ್ರಾ ಅವರು ಹಿಂದೂ ಪರ ಸಂಘಟನೆ ಪರವಾಗಿ ಹಲವು ಕೆಲಸ ಮಾಡಿದ್ದಾರೆ ಅವರಿಗೆ ನ್ಯಾಯ ಕೊಡಿಸಿ ಎಂದು ಹೇಳಿದರು. ಬಿಜೆಪಿ ಗೆಲ್ಲಲು ಕಾರ್ಯಕರ್ತರು, ಅಲ್ಪಸಂಖ್ಯಾತರು ಕಾರಣ. ನಿಮ್ಮ ವಿರಶೈವರು ನಿಮ್ಮನ್ನು ಗೆಲ್ಲಿಸಿಲ್ಲ ಎಂದು ಗಂಗಾವತಿ ಶಾಸಕರ ವಿರುದ್ಧ ಸೈಯದ್ ಅಲಿ ಹೇಳಿಕೆ ನೀಡಿದ್ದಾರೆ.
ಸದ್ಯ ಈ ಎಲ್ಲಾ ಆರೋಪಗಳಿಗೆ ಉತ್ತರಿಸಿರುವ ಶಾಸಕ ಪರಣ್ಣ ಮುನವಳ್ಳಿ, ಸೈಯದ್ ಅಲಿ ಅವರ ಆರೋಪಕ್ಕೆ ಯಾವುದೇ ಪುರಾವೆ ಅಥವಾ ದಾಖಲೆಗಳಿಲ್ಲ. ನಗರ ಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ್ದಕ್ಕೆ ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸೈಯದ್ ಅವರ ಬಳಿ ಶಾಸಕರ ವಿರುದ್ಧ ಅವರು ಮಾಡಿರುವ ಆರೋಪಗಳಿಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ತಿರುಗೇಟು ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv