ಚಿತ್ರದುರ್ಗ: ಚಳ್ಳಕೆರೆ ನಗರಸಭೆ ಸದಸ್ಯ ಶಿವಮೂರ್ತಿ ಎಂಬವರು ತಹಶೀಲ್ದಾರ್ ಕಾಂತರಾಜ್ ರಿಗೆ ಅವಾಜ್ ಹಾಕಿದ್ದಾರೆ.
ಕಾಂಗ್ರೆಸ್‍ನಿಂದ ಗೆದ್ದು ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಶಿವಮೂರ್ತಿ, ತಹಶೀಲ್ದಾರ್ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದೆ. ಕಾಂತರಾಜ್ ಅವರಿಗೆ ಕರೆ ಮಾಡಿರುವ ಶಿವಮೂರ್ತಿ ಜಾತಿ ನಿಂದನೆ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಆಡಿಯೋದಲ್ಲಿ ಏನಿದೆ?: ಕಾಂಗ್ರೆಸ್ ಶಾಸಕ ರಘುಮೂರ್ತಿ ಅಣತಿಯಂತೆ ಆಡಳಿತ ಮಾಡುತ್ತೀಯಾ, ಒಂದೂವರೆ ತಿಂಗಳಲ್ಲಿ ಚಳ್ಳಕೆರೆ ತಹಶೀಲ್ದಾರ್ ಆಗಿ ಇರೋದಿಲ್ಲ. ಕಚೇರಿಗೆ ಬಂದಾಗ ಏಕವಚನದಲ್ಲಿ ಹೇಳಿ ಹೊರಕಳಿಸುತ್ತೀಯಾ? ತಾಕತ್ ಇದ್ದರೆ ನನ್ನನ್ನು ಅರೆಸ್ಟ್ ಮಾಡಿಸು. ಈ ವೇಳೆ ಸಚಿವ ಹೆಚ್.ಆಂಜನೇಯರ ಹೆಸರನ್ನು ಪ್ರಸ್ತಾಪ ಮಾಡಿ, ಅವರ ಬಗ್ಗೆಯೂ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಾನು ಯಾರ ಅಣತಿ ಹಾಗು ಹೆದರಿಕೆಯಿಂದ ಕೆಲಸ ಮಾಡಲ್ಲ. ಸರಿಯಾಗಿ ಮಾತನಾಡಿ ಅಂತಾ ತಹಶೀಲ್ದಾರ್ ಕಾಂತರಾಜ್ ಉತ್ತರ ನೀಡಿದ್ದಾರೆ.
ಸದ್ಯ ಈ ಆಡಿಯೋ ವಾಟ್ಸಪ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂದು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಶಿವಮೂರ್ತಿಯವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ಸಾಧ್ಯತೆಗಳಿವೆ.