ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯಕೀಯ ತಪಾಸಣೆ ಹಿನ್ನಲೆಯಲ್ಲಿ ಅರುಣ್ ಜೇಟ್ಲಿ ಅವರನ್ನು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. 66 ವರ್ಷದ ಅರುಣ್ ಜೇಟ್ಲಿ ಅವರನ್ನು ನೆಫ್ರಾಲಜಿಸ್ಟ್, ಹೃದ್ರೋಗ ತಜ್ಞರು ತಪಾಸಣೆ ಮಾಡುತ್ತಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್, ಗೃಹ ಸಚಿವ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಕಳೆದ ಎನ್‍ಡಿಎ ಸರ್ಕಾರದ ಅವಧಿಯ ಅಂತಿಮ ಬಜೆಟ್ ವೇಳೆಯೂ ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದ ಪರಿಣಾಮ ರೈಲ್ವೇ ಸಚಿವರಾಗಿದ್ದ ಪಿಯೂಷ್ ಗೋಯೆಲ್ ಅವರು ಬಜೆಟ್ ಮಂಡನೆ ಮಾಡಿದ್ದರು. ಇದಕ್ಕೂ ಮುನ್ನ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೂರು ತಿಂಗಳ ಕಾಲ ಸುದೀರ್ಘ ರಜೆ ಪಡೆದಿದ್ದ ಅರುಣ್ ಜೇಟ್ಲಿ ಅವರು ಆ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಅವಧಿಯಲ್ಲೂ ಸಚಿವ ಪಿಯೂಷ್ ಗೋಯಲ್ ಅವರು ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದರು.
2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಟ್ವೀಟ್ ಮಾಡಿ, ಎರಡನೇ ಅವಧಿ ನಿಮ್ಮ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿ ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಡಿಕೊಂಡಿದ್ದರು.
ನಿಮ್ಮ ಸರ್ಕಾರದ ಅವಧಿಯಲ್ಲಿ 5 ವರ್ಷ ಸಚಿವನಾಗಿ ಕಾರ್ಯನಿರ್ವಹಿಸಿದ್ದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿಂದೆಯೂ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಸಚಿವನಾಗಿದ್ದೆ. ಸದ್ಯ ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡುತ್ತಿಲ್ಲ. ಕಳೆದ 9 ತಿಂಗಳಿನಿಂದ ಅನಾರೋಗ್ಯದ ಸಮಸ್ಯೆ ಎದುರಿಸಿದ್ದೇನೆ. ಚುನಾವಣಾ ಪ್ರಚಾರ ಮುಗಿದ ಬಳಿಕ ನಾನು ಮೌಖಿಕವಾಗಿ ತನ್ನ ನಿರ್ಧಾರವನ್ನು ನಿಮಗೆ ತಿಳಿಸಿದ್ದೆ. ಅನಾರೋಗ್ಯದ ಸಮಸ್ಯೆಯಿಂದ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ಕಷ್ಟ. ಆದ್ದರಿಂದ ಅಧಿಕೃತವಾಗಿ ಈ ಬಗ್ಗೆ ಸ್ಪಷ್ಟಪಡಿಸುತ್ತಿದ್ದೇನೆ. ಈ ಬಾರಿಯ ಸಂಪುಟ ಸೇರದಿರಲು ನಿರ್ಧರಿಸಿದ್ದು, ನನ್ನ ಸಹಕಾರ ಸದಾ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು.