ಹಾಸನ: ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡನನ್ನು ಇಂದು ಬಂಧಿಸಲಾಗಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ನಗರಠಾಣೆ ಪೊಲೀಸರು ಇಂದು ಅರೆಸ್ಟ್ ಮಾಡಿದ್ದಾರೆ. ಸತತ ನಾಲ್ಕೂವರೆ ಗಂಟೆ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇನ್ನೂ ಹೇಳಿಕೆ ಪಡೆಯುವುದು ಬಾಕಿ ಇದೆ. ಹೇಳಿಕೆ ಪಡೆದ ಬಳಿಕ ದೇವರಾಜೇಗೌಡರನ್ನು ಮೆಡಿಕಲ್ ಟೆಸ್ಟ್‌ಗೆ ಪೊಲೀಸರು ಕರೆದೊಯ್ಯಲಿದ್ದಾರೆ. ತದನಂತರ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ.
ಇತ್ತ ದೇವರಾಜೇಗೌಡ ಕಾರು ಚಾಲಕನನ್ನು ಕರೆದೊಯ್ದು ಪೊಲೀಸರು ಕಾರು ತಪಾಸಣೆ ನಡೆಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಜಯ್‌ಕುಮಾರ್ ಅವರು ಕಾರಿನಲ್ಲಿದ್ದ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಕಾರಿನಲ್ಲಿದ್ದ ಮೊಬೈಲ್ ಕೂಡ ವಶಕ್ಕೆ ಪಡೆದಿದ್ದಾರೆ. ಸದ್ಯ ದೇವರಾಜೇಗೌಡ ಕಾರು ಪೊಲೀಸರ ವಶದಲ್ಲಿದೆ. ಇದನ್ನೂ ಓದಿ: ಇಂದು ನ್ಯಾಯಾಧೀಶರ ಮುಂದೆ ದೇವರಾಜೇಗೌಡ
ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವಕೀಲ ದೇವರಾಜೇಗೌಡರನ್ನು (G Devarajegowda) ಶುಕ್ರವಾರ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಪೊಲೀಸರ ಮಾಹಿತಿ ಮೇರೆಗೆ ಹಿರಿಯೂರು ಪೊಲೀಸರು ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyuru) ತಾಲೂಕಿನ ಗುಯಿಲಾಳ್ ಟೋಲ್ ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದಾರೆ.