ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕಕಾಲದಲ್ಲಿ ಮೂರು ಅಸ್ತ್ರಗಳನ್ನು ಪ್ರಯೋಗಿಸಲು ಬಿಜೆಪಿ ಸರ್ಕಾರ ಈಗ ಮುಂದಾಗಿದೆ.
ಹೌದು. ಬಿಜೆಪಿ ನಾಯಕರ ಫೋನ್ ಕರೆಯನ್ನು ಕದ್ದಾಲಿಸಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೇ ಸರ್ಕಾರ ಈಗ ಎಚ್‍ಡಿಕೆಯನ್ನು ಕಟ್ಟಿ ಹಾಕಲು ಮುಂದಾಗಿದೆ. ಮೊದಲನೆಯದಾಗಿ ಜಂತಕಲ್ ಮೈನಿಂಗ್ ಪ್ರಕರಣದ ತನಿಖೆಯನ್ನು ಕಳೆದ 4 ವರ್ಷಗಳಿಂದ ವಿಶೇಷ ತನಿಖಾ ತಂಡ ನಡೆಸಿಕೊಂಡು ಬರುತ್ತಿದೆ. ತನಿಖೆ ನಡೆದು 1.5 ವರ್ಷವಾದರೂ ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಈಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಎಸ್‍ಐಟಿ ಸಿದ್ಧತೆ ನಡೆಸುತ್ತಿದೆ.
ಐಎಂಎ ವಂಚಕ ಮನ್ಸೂರ್ ಜೊತೆ ಎಚ್‍ಡಿ ಕುಮಾರಸ್ವಾಮಿ ಗುರುತಿಸಿಕೊಂಡಿದ್ದರು. ಮನ್ಸೂರ್ ಜೊತೆ ಕುಮಾರಸ್ವಾಮಿ ಹಣವನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಈಗಾಗಲೇ ಕೇಳಿ ಬಂದಿದೆ. ಒಂದು ವೇಳೆ ಕೋರ್ಟ್ ವಿಚಾರಣೆಯ ವೇಳೆ ಮನ್ಸೂರ್ ಖಾನ್ ಕುಮಾರಸ್ವಾಮಿ ಅವರಿಗೂ ನಾನು ಹಣವನ್ನು ನೀಡಿದ್ದೇನೆ ಎಂದು ಬಾಯಿಬಿಟ್ಟರೆ ಈ ಪ್ರಕರಣವನ್ನೂ ಸಿಬಿಐಗೆ ನೀಡುವ ಸಾಧ್ಯತೆಯಿದೆ.
ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯ ಸಿಬಿಐ ಆರಂಭಿಸಿದರೆ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಎಲ್ಲವೂ ದೊಡ್ಡ ಪ್ರಕರಣಗಳೇ ಆಗಿರುವ ಕಾರಣ ತನ್ನ ಮೇಲೆ ಬಂದಿರುವ ಆರೋಪಗಳಿಂದ ಮುಕ್ತರಾಗಲು ಕುಮಾರಸ್ವಾಮಿ ದೊಡ್ಡ ಕಾನೂನು ಹೋರಾಟ ಮಾಡಬೇಕಾಗುತ್ತದೆ.