– ಮೊದಲ ಆದ್ಯತೆ ಕಾರ್ಯಕರ್ತರು ಎಂಬ ಸಂದೇಶ ರವಾನಿಸಿದ ವಿಜಯೇಂದ್ರ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮರುದಿನವೇ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ಹಿರಿಯ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿ ಸಂಭ್ರಮಾಚರಣೆ ಮಾಡಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷ ಶಶಿಧರ್ ಮನೆಗೆ ವಿಜಯೇಂದ್ರ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿದರು. ಅಲ್ಲದೇ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಮೊದಲ ಆದ್ಯತೆ ಕಾರ್ಯಕರ್ತರು ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಶಶಿಧರ್ ಮನೆಗೆ ಭೇಟಿ ಕೊಟ್ಟ ವಿಜಯೇಂದ್ರ ಅವರು ಕಾರ್ಯಕರ್ತನಿಗೆ ಸಿಹಿ ತಿನ್ನಿಸಿದರು. ನಂತರ ಪಕ್ಷದ ಶಾಲು ಹಾಕಿ ಕಾರ್ಯಕರ್ತನನ್ನು ಸನ್ಮಾನಿಸಿದರು. ಶಶಿಧರ್ ಕುಟುಂಬಸ್ಥರಿಗೆ ದೀಪಾವಳಿ ಶುಭ ಕೋರಿದರು. ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯ ಮೂಡಿಸುವ ನಿಟ್ಟಿನಲ್ಲಿ ವಿಜಯೇಂದ್ರ ಈ ಪ್ರಯತ್ನ ಆರಂಭಿಸಿದ್ದಾರೆ.
ವಿಜಯೇಂದ್ರ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಕಾರ್ಯಕರ್ತ ಶಶಿಧರ್, ವಿಜಯೇಂದ್ರ ಅವರು ಯುವಕರಿದ್ದಾರೆ. ತಂದೆಯ ಅನುಭವ ಹೊಂದಿದ್ದಾರೆ. ನಿನ್ನೆ ಬರ್ತೀನಿ ಅಂದಿದ್ದರು. ನಂಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು.
ಆಯ್ಕೆಯಾದ ಕೂಡಲೇ ಸ್ಥಳೀಯ ಕಾರ್ಯಕರ್ತರ ಭೇಟಿಗೆ ಬರ್ತಾ ಇದ್ದಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಯುವಕರು ರಾಜ್ಯಾಧ್ಯಕ್ಷರಾಗಿರುವುದು ಖುಷಿ ಕೊಟ್ಟಿದೆ ಎಂದು ಶಶಿಧರ್ ತಿಳಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಆಯ್ಕೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದರು. ಆಯ್ಕೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಜಯೇಂದ್ರಗೆ ಫೋನ್ ಕರೆ ಮಾಡಿ ಶುಭಾಶಯ ತಿಳಿಸಿದರು. ಪಕ್ಷ ಸಂಘಟನೆ ಮಾಡುವಂತೆ ಸಲಹೆ ನೀಡಿದರು. ಬಳಿಕ ವಿಜಯೇಂದ್ರ ಅವರು ತಂದೆ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.