– ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ
– ಸ್ವತಂತ್ರವಾಗಿಯೇ ಕ್ಷೇತ್ರದ ಕೆಲಸ
– ನನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳು
ಚಾಮರಾಜನಗರ: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರ್ಕಾರದ ಮಂತ್ರಿ ಮಂಡಲವನ್ನೂ ಸೇರುವುದಿಲ್ಲ ಎಂದು ಮಾಜಿ ಸಚಿವ, ಕೊಳ್ಳೇಗಾಲ ಕ್ಷೇತ್ರದ ಬಿಎಸ್‍ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವ ಪಕ್ಷಕ್ಕೂ ಬೆಂಬಲ ನೀಡಿಲ್ಲ. ಪಕ್ಷದ ಹೈಕಮಾಂಡ್ ಆದೇಶದಂತೆ ತಟಸ್ಥವಾಗಿದ್ದೇನೆ. ಆದರೆ, ಹಿಂದಿನ ಸರ್ಕಾರ ಬಹುಮತ ಸಾಬೀತು ಪಡಿಸುವ ವೇಳೆ ಸದನಕ್ಕೆ ಹಾಜರಾಗುವಂತೆ ಸೂಚಿಸಿ ಬಿಎಸ್‍ಪಿ ವರಿಷ್ಠೆ ಮಾಯಾವತಿ ಅವರು ಮಾಡಿದ ಟ್ವೀಟನ್ನು ನಾನು ಗಮನಿಸಿರಲಿಲ್ಲ. ಹೀಗಾಗಿ ಸದನಕ್ಕೆ ಹಾಜರಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಬೆಹನ್ ಜೀ ಮಾಹಿತಿ ಕೊರತೆಯಿಂದ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದು ಸರಿ ಹೋಗಲಿದೆ. ನಾನು ಸ್ವತಂತ್ರವಾಗಿದ್ದೇನೆ, ಸ್ವತಂತ್ರವಾಗಿಯೇ ಕ್ಷೇತ್ರದ ಕೆಲಸ ಮಾಡುತ್ತೇನೆ. ನನ್ನ ಮೇಲೆ ಬರುತ್ತಿರುವ ಆರೋಪಗಳೆಲ್ಲ ಸುಳ್ಳು. ನಾನು ಯಾವ ಪಕ್ಷಕ್ಕೂ ಸಹಾಯ ಮಾಡಿಲ್ಲ. ಬೆಹನ್ ಜೀ ಅವರ ಆದೇಶದ ಮೇರೆಗೆ ತಟಸ್ಥವಾಗಿದ್ದೆ. ಆದರೆ ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಮೇಲೆ ಬರುತ್ತಿರುವ ಆರೋಪಗಳೆಲ್ಲ ಸುಳ್ಳು. ನನಗೆ ಯಾವ ಪಕ್ಷದ ಸಹಾಯವೂ ಬೇಡ. ಪ್ರಸ್ತುತ ಬಿಜೆಪಿ ಸರ್ಕಾರವಿದೆ. ಅವರಿಂದ ನನ್ನ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತೇನೆ. ಆದರೆ, ಹಿಂದಿನ ಸರ್ಕಾರ ನನ್ನ ಕ್ಷೇತ್ರದ ಸಮಸ್ಯಗಳಿಗೆ ಸ್ಪಂದಿಸಲಿಲ್ಲ. ನಾನು ಕೇಳಿದಷ್ಟು ಅನುದಾನವನ್ನು ನೀಡಲಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.