ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ (Congress) ಯುವ ನಾಯಕ ರಾಹುಲ್ ಗಾಂಧಿ (Rahul Gandhi) ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ (Bharat Jodo Yatra) ಈ ಬಾರಿಯ ವಿಧಾನಸಭೆ ಚುನಾವಣೆ ಮೇಲೆ ಸಾಕಷ್ಟು ಪ್ರಭಾವ ಬೀರಿದೆಯಾ? ಹೌದೆನ್ನುತ್ತಿವೆ ಕಾಂಗ್ರೆಸ್ ಪಕ್ಷದ ಗೆಲುವಿನ ಯಾದಿ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯು ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಹಾದು ಹೋಗಿದ್ದು, ಏಳೂ ಜಿಲ್ಲೆಯ ಅಭ್ಯರ್ಥಿಗಳ ವೋಟಿನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಹೀಗಾಗಿಯೇ ಅನೇಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಹೊರಟಿದ್ದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯು ದೇಶದ ನಾನಾ ರಾಜ್ಯಗಳಲ್ಲಿ ಸಂಚರಿಸಿದೆ. ಕರ್ನಾಟಕದಲ್ಲಿ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಮಂಡ್ಯ, ಮೈಸೂರು, ರಾಯಚೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇದು ಸಂಚರಿಸಿದೆ. ಈ ಭಾಗದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅದು ಸಾಕಷ್ಟು ಸಹಾಯ ಮಾಡಿದೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates
ಬಳ್ಳಾರಿ ಕ್ಷೇತ್ರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರ, ಮೈಸೂರಿನ ನರಸಿಂಹರಾಜ ಹಾಗೂ ವರುಣಾ ಕ್ಷೇತ್ರ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 2018ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಿದ್ದರು. ಈ ಬಾರಿಯೂ ಅವರು ಸಲೀಸಾಗಿ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದಾರೆ. ಅಲ್ಲದೇ, ಹೆಚ್ಚಿನ ಅಂತರದಿಂದಲೂ ಅವರೆಲ್ಲ ಗೆಲುವು ಸಾಧಿಸಿದ್ದಾರೆ.
ಉಳಿದಂತೆ 2018ರಲ್ಲಿ ಬಿಜೆಪಿ (BJP) ಗೆದ್ದಿದ್ದ ಹಲವು ಕ್ಷೇತ್ರಗಳನ್ನು ಈ ಬಾರಿ ಭಾರತ್ ಜೋಡೋ ಯಾತ್ರೆ ಪ್ರಭಾವ ಕಸಿದುಕೊಂಡಿದೆ. ಬಳ್ಳಾರಿ ಸಿಟಿ ಕಳೆದ ಸಲ ಬಿಜೆಪಿ ಗೆದ್ದಿದ್ದರೆ, ಈ ಬಾರಿ ಕಾಂಗ್ರೆಸ್ ಗೆಲುವಿನ ಬಾವುಟ ಹಾರಿಸಿದೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಈ ಬಾರಿ ಕಾಂಗ್ರೆಸ್ ಆ ಕ್ಷೇತ್ರವನ್ನು ವಶಪಡಿಸಿಕೊಂಡಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆಲುವಿನ ನಗೆ ಬೀರಿತ್ತು. ಈ ಬಾರಿ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಈ ಬಾರಿ ಕಾಂಗ್ರೆಸ್ ಗೆದ್ದಿದೆ.
ಭಾರತ್ ಜೋಡೋ ಯಾತ್ರೆ ಪ್ರಭಾವಕ್ಕೆ ಜೆಡಿಎಸ್ (JDS) ಪಕ್ಷದ ಕೆಲ ಅಭ್ಯರ್ಥಿಗಳು ಕೂಡ ತಲೆಬಾಗಿದ್ದಾರೆ. 2018ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ, ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಗೆದ್ದು ಬೀಗಿತ್ತು. ಈ ಬಾರಿ ಮೂರು ಕ್ಷೇತ್ರಗಳನ್ನೂ ಕಾಂಗ್ರೆಸ್ ವಶಪಡಿಸಿಕೊಂಡಿದೆ. ಇದಕ್ಕೆ ಭಾರತ್ ಜೋಡೋ ಯಾತ್ರೆಯೂ ಕಾರಣವೆಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅಲ್ಲದೇ, ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ಸಿರಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದು ಬೀಗಿದೆ.
ಭಾರತ್ ಜೋಡೋ ಯಾತ್ರೆ ಪಯಣಿಸಿದ ಈ ಇಪ್ಪತ್ತು ಕ್ಷೇತ್ರಗಳಲ್ಲಿ 2018ರಲ್ಲಿ ಕಾಂಗ್ರೆಸ್ 5, ಜೆಡಿಎಸ್ 6 ಹಾಗೂ ಬಿಜೆಪಿ 9 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2023ರಲ್ಲಿ ಕಾಂಗ್ರೆಸ್ 15, ಜೆಡಿಎಸ್ 3 ಹಾಗೂ ಬಿಜೆಪಿ 2 ಸ್ಥಾನಗಳನ್ನು ಪಡೆದುಕೊಂಡಿದೆ. ಜೆಡಿಎಸ್ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದರೆ, ಬಿಜೆಪಿ ಏಳು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಹತ್ತು ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ.