– ಪಾದಯಾತ್ರೆಗೂ ಮುನ್ನ `ಬಿಡದಿ ತಟ್ಟೆ ಇಡ್ಲಿ’ ಸವಿದ ಬಿಜೆಪಿ ರಾಜ್ಯಾಧ್ಯಕ್ಷ
ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ವತಿಯಿಂದ ನಡೆಯುತ್ತಿರುವ `ಮೈಸೂರು ಚಲೋ’ (Mysuru Chalo) ಪಾದಯಾತ್ರೆಯು 2ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನಂದಂತೆಯೇ `ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿʼ, ʻಧಿಕ್ಕಾರ, ಧಿಕ್ಕಾರ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ, ರಾಜ್ಯ ಸರ್ಕಾರಕ್ಕೆ ಧಿಕ್ಕಾರʼ ಘೋಷಣೆಗಳನ್ನು ಬಿಜೆಪಿ-ಜೆಡಿಎಸ್ ನಾಯಕರು ಮೊಳಗಿಸುತ್ತಿದ್ದಾರೆ.
ಬೆಳಗ್ಗೆ 9:30ರ ಸುಮಾರಿಗೆ 2ನೇ ದಿನದ ಪಾದಯಾತ್ರೆ ಆರಂಭಗೊಂಡಿದ್ದು, ಬಿಡದಿಯಿಂದ ರಾಮನಗರದ (Ramanagara) ಕೆಂಗಲ್‌ವರೆಗೆ ಅಂದ್ರೆ ಸುಮಾರು 22 ಕಿಮೀ ವರೆಗೆ ಪಾದಯಾತ್ರೆ ಸಾಗಲಿದೆ. ರಾಮನಗರದಲ್ಲಿ ಸಂಜೆ 4 ಗಂಟೆ ವೇಳೆಗೆ ದೋಸ್ತಿ ನಾಯಕರಿಂದ ಸಾರ್ವಜನಿಕ ಸಭೆ ನಡೆಯಲಿದೆ. ಶನಿವಾರ (ಆ.3) ಕೆಂಗೇರಿಯಲ್ಲಿ ಉದ್ಘಾಟನೆಗೊಂಡ ಪಾದಯಾತ್ರೆಯು ಮೊದಲ ದಿನ ಬಿಡದಿವರೆಗೆ ನಡೆದಿತ್ತು.
ತಟ್ಟೆ ಇಡ್ಲಿ ಸವಿದ ವಿಜಯೇಂದ್ರ
ಪಾದಯಾತ್ರೆಗೂ ಮುನ್ನ ಬಿಡದಿಯಲ್ಲಿ ಮುಖಂಡರ ಜೊತೆ ವಿಜಯೇಂದ್ರ (BY Vijayendra) ತಟ್ಟೆ ಇಡ್ಲಿ ಸವಿದರು. ಈ ವೇಳೆ ಶಾಸಕರಾದ ಸಿ.ಕೆ ರಾಮಮೂರ್ತಿ, ಎಂ. ಕೃಷ್ಣಪ್ಪ, ಡಿ.ಎಸ್ ಅರುಣ್, ಎನ್. ರವಿಕುಮಾರ್, ಶರಣು ಸಲಗರ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಪ್ರಮುಖರು ಉಪಾಹಾರ ಸೇವಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಪಾದಯಾತ್ರೆ ನೋಡಿ ಆಡಳಿತ ಪಕ್ಷ ಗಾಬರಿಯಾಗಿದೆ. ರಾಜ್ಯದ ಜನರ ಪರ ನಾವು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿದ್ದೀವಿ. ನಮ್ಮ ಪ್ರಶ್ನೆಗಳಿಗೆ ಅವರಿಬ್ಬರೂ (ಸಿಎಂ, ಡಿಸಿಎಂ) ಉತ್ತರ ಕೊಡಬೇಕು. ಅವರು ಉತ್ತರ ಕೊಡುವ ಬದಲು ಬೆದರಿಕೆ ಹಾಕ್ತಿದ್ದಾರೆ. ಸದನದಲ್ಲೂ ಅವರು ಅಕ್ರಮಗಳ ಬಗ್ಗೆ ಉತ್ತರ ಕೊಡಲಿಲ್ಲ. ಆದರೆ ಉತ್ತರ ಕೊಡೋವರೆಗೂ ನಾವು ಬಿಡಲ್ಲ, ಹೋರಾಟ ಬಿಡಲ್ಲ. ಇದು ಹಗರಣಗಳ ಕೂಪ ಆಗಿದೆ. ಆಡಳಿತ ಪಕ್ಷದ ಪರಿಸ್ಥಿತಿ ಹಾಳಾಗಿದೆ. ಭ್ರಷ್ಟಾಚಾರದಲ್ಲಿ ಎಲ್ಲರೂ ನಿರತರಾಗಿದ್ದಾರೆ. ಪಿಎಸ್‌ಐ ಪರಶುರಾಮ್ ಅವರು ಶಾಸಕರ ಒತ್ತಡದ ಕಾರಣ ಮೃತ ಪಟ್ಟಿದ್ದಾರೆ. ಸ್ಥಳೀಯ ಶಾಸಕ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದೇ ಪರಶುರಾಮ್ ಸಾವಿಗೆ ಕಾರಣ. ಅಷ್ಟೇ ಅಲ್ಲ ನಿರಂತರವಾಗಿ ವರ್ಗಾವಣೆ ದಂಧೆಯೂ ನಡೀತಿದೆ ಎಂದು ಗುಡುಗಿದ್ದಾರೆ.
ಯತ್ನಾಳ್ ವಿರುದ್ಧ ಶಾಸಕ ಕೃಷ್ಣಪ್ಪ ವಾಗ್ದಾಳಿ:
ಪಾದಯಾತ್ರೆಗೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಕೃಷ್ಣಪ್ಪ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾದಯಾತ್ರೆ ಬಗ್ಗೆ ನಮ್ಮದೇ ಪಕ್ಷದ ಕೆಲವರು ಟೀಕೆ ಮಾಡ್ತಿದ್ದಾರೆ. ಯತ್ನಾಳ್ ಅವರೇ ಯಾಕೆ ಹೀಗ್ ಮಾಡ್ತೀರಿ? ಪಕ್ಷ ಸಂಘಟನೆಗೆ ಗಮನ ಕೊಡಿ. ಬಿಜೆಪಿ ಸರ್ಕಾರ ಇದ್ದಾಗಲೂ ಮಾತಾಡ್ತಿದ್ರಿ, ಈಗಲೂ ಮಾತಾಡ್ತಿದೀರಿ. ಪಕ್ಷದ ವಿಚಾರ ಯಾಕೆ ಹೀಗೆಲ್ಲ ಮಾತಾಡ್ತೀರಿ. ನಿಮ್ಮ ಕ್ಷೇತ್ರದಲ್ಲೇ ನೀವು ಲೀಡ್ ಕೊಡಿಸೋಕ್ಕೆ ಆಗಲಿಲ್ಲ. ನೀವೇನು ಪಾದಯಾತ್ರೆ ಬಗ್ಗೆ ಮಾತಾಡೋದು? ಮೊದಲು ನಿಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.